ಜಿಲ್ಲೆ

ಸಿಎಂ ಹೇಳಿಕೆ ಮೂರ್ಖತನದ ಪರಮಾವಧಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಆರ್​ಎಸ್​ಎಸ್ ಈ ದೇಶದ ಒಂದು ಸಾಂಸ್ಕೃತಿಕ ಸಂಘಟನೆ. ಇದನ್ನು ಭಯೋತ್ಪಾದಕ ಸಂಘಟನೆ ಜತೆ ಹೋಲಿಕೆ ಮಾಡಲು ಮುಖ್ಯಮಂತ್ರಿಯವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆರ್​ಎಸ್​ಎಸ್ ಮೇಲಿನ ಪ್ರಕರಣಗಳನ್ನು ಹಿಂಪಡೆದಿಲ್ಲವೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಹೀಗೆ ತಿರುಗೇಟು ನೀಡಿದರು.

ಎಲ್ಲೂ ಕೂಡ ಆರ್​ಎಸ್​ಎಸ್ ಮೇಲಿನ ಆರೋಪ ಸಾಬೀತಾಗಿಲ್ಲ. ಆದರೂ ಕಾಂಗ್ರೆಸ್​ನವರು 2-3 ಬಾರಿ ಆರ್​ಎಸ್​ಎಸ್ ಸಂಘಟನೆಯನ್ನು ಬ್ಯಾನ್ ಮಾಡಿದ್ದರು. ಕೊನೆಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರೇ ಆರ್​ಎಸ್​ಎಸ್ ಕೈವಾಡವಿಲ್ಲ ಎಂದು ಹೇಳಿದ್ದಾರೆ. ಇದೆಲ್ಲ ಗೊತ್ತಿದ್ದೂ ಸಿಎಂ ಇಂಥ ಹೇಳಿಕೆ ಕೊಡುತ್ತಾರೆಂದರೆ, ಅದು ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.

ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಬೇಕು ಎಂದು ಹೇಳಿಕೆ ನೀಡಿರುವ ಯಾಸಿನ್ ಮಲ್ಲಿಕ್, ಅಬ್ದುಲ್ ಘನಿ ಅವರಂಥ ಇಸ್ಲಾಂ ಮತಾಂಧರ ಜತೆ ಕೈ ಜೋಡಿಸಿ ದೋಸ್ತಿ ಮಾಡಿರುವುದು ಕಾಂಗ್ರೆಸ್. ಹೀಗಿರುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಬಗ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಆರ್​ಎಸ್​ಎಸ್ ಬಗ್ಗೆ ಮಾತನಾಡುವುದು ದುರಂತ ಎಂದರು.

ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶೇ.95ರಷ್ಟು ಭಯೋತ್ಪಾದನೆ ಚಟುವಟಿಕೆಗಳನ್ನು ನಿಗ್ರಹಿಸಿದೆ. ಆದರೆ ಕಾಂಗ್ರೆಸ್​ನವರು ಅಂಥವರೊಂದಿಗೇ ದೋಸ್ತಿ ಬೆಳೆಸುತ್ತ ಬಿಜೆಪಿ ಭಯೋತ್ಪಾದಕ ಪಕ್ಷ ಎನ್ನುತ್ತಿರುವುದು ಹಾಸ್ಯಾಸ್ಪದ. ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್​ಐಎ ನಿಂದ ಹಿಂಪಡೆದು ಸಮಾಜ ದ್ರೋಹಿ ಶಕ್ತಿಗಳಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಒಂದು ಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.