ಜಿಲ್ಲೆ

ಸಿಎಂ ರಾಜೀನಾಮೆ ದಿನಾಂಕ ನಿಗದಿಯಾಗಿದೆ: ಬಿ.ವೈ.ವಿಜಯೇಂದ್ರ ಭವಿಷ್ಯ

ಮಂಜುನಾಥ ತಿಮ್ಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.


ನಗರದಲ್ಲಿ ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ದಿನಾಂಕ ಈಗಾಗಲೇ ನಿಗದಿಯಾಗಿದೆ ಎಂದು ಹೇಳಿದರು.


ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೇ ಕೊಡ್ತಾರೆ. ನಮ್ಮ ಪಾದಯಾತ್ರೆಯ ಸಮಾರೋಪ ದಿನದಿಂದಲೇ ರಾಜೀನಾಮೆಗೆ ಕ್ಷಣಗಣನೆ ಶುರುವಾಗಿದೆ. ನಾನು ರಾಜಕೀಯ ಹೇಳಿಕೆಯನ್ನು ಕೊಡ್ತಿಲ್ಲ. ದಸರಾ ಸಂದರ್ಭದಲ್ಲಿ ಹೇಳ್ತಿದ್ದೇನೆ, ಯಾವ ಸಂದರ್ಭದಲ್ಲಿಯಾದರೂ ಅವರು ರಾಜೀನಾಮೆ ಕೊಡ್ತಾರೆ. ಅಂತಹ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್‌ನ ಹೈಕಮಾಂಡ್ ಕೂಡ ರಾಜೀನಾಮೆ ಪಡೆಯುವ ಚಿಂತನೆ ಮಾಡಿದೆ. ಅದು ಏನು ಚರ್ಚೆ ಮಾಡುತ್ತಿದೆ ಎಂದು ಸಿಎಂಗೂ ಗೊತ್ತಿದೆ ಎಂದು ಹೇಳಿದರು.


ನಮ್ಮ ಉದ್ದೇಶ ಸಿದ್ದರಾಮಯ್ಯನವರನ್ನು ಇಳಿಸಬೇಕೆಂಬುದಲ್ಲ, ಭ್ರಷ್ಟ ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ. ಆ ನಿಟ್ಟಿನಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಂದರ್ಭದಲ್ಲಿ ನಿಂತಿದ್ದೇವೆ. ದಸರಾ ಆದ ಮೇಲೆ ರಾಜೀನಾಮೆ ಕೊಡುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.


ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಅಂತಹ ಕೆಟ್ಟ ಪರಿಸ್ಥಿತಿ ಅವರಿಗೆ ಬಂದೊದಗಿದೆ. ಮತ್ತೊಂದು ಕಡೆ ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸಗಳ ಮಾತೇ ಇಲ್ಲ. ಮತ್ತೊಂದು ಕಡೆ ಸತೀಶ್ ಜಾರಕಿಹೊಳಿಯವರನ್ನು ದೆಹಲಿಗೆ ಸಿದ್ದರಾಮಯ್ಯರೇ ಕಳುಹಿಸಿಕೊಟ್ಟಿದ್ದಾರೆ ಎಂದರು.


ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅಷ್ಟೇ ಅಲ್ಲ, ಏಳೆಂಟು ಜನ ಸಿಎಂ ಖುರ್ಚಿಗೆ ಟವೆಲ್ ಹಾಕಿ ಕುಳಿತಿದ್ದಾರೆ. ಯಾರು ಮುಖ್ಯಮಂತ್ರಿ ಆಗುತ್ತಾರೋ ನಮಗೆ ಗೊತ್ತಿಲ್ಲ. ಅದು ಕಾಂಗ್ರೆಸ್‌ನ ಆಂತರಿಕ ವಿಚಾರ. ಆದರೆ, ಸಿದ್ದರಾಮಯ್ಯ ಮಾತ್ರ ಅಧಿಕಾರದಲ್ಲಿ ಇರುವುದಿಲ್ಲ ಎಂಬುದು ಮಾತ್ರ ಸತ್ಯ ಎಂದು ಹೇಳಿದರು.