ಜಿಲ್ಲೆ

ಗಣೇಶ ವಿಸರ್ಜನಾ ಮೆರವಣಿಗೆ ಭದ್ರತೆಗೆ 4ಸಾವಿರ ಸಿಸಿಟಿವಿ!

ಮಂಜುನಾಥ ಕೋಳಿಗುಡ್ಡ

- 4ಸಾವಿರ ಸಾರ್ವಜನಿಕ ಸಿಸಿಟಿವಿ ಬಳಕೆ

-ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ವೀಕ್ಷಣೆಗೆ ಬರುವ ಜನರ ಸುರಕ್ಷತೆ ಹಿತದೃಷ್ಟಿಯಿಂದ ಮಾರ್ಗ ಉದ್ಧಕ್ಕೂ ಭದ್ರತೆ ಜತೆಗೆ ಹೈಮಾಸ್ಕ್ ಬಲ್ಬ್ ಬೆಳಕಿನ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ನಿಗದಿತ ಸಮಯದಲ್ಲಿ ಮುಗಿಸಲು ಮತ್ತು ಡಿಜೆ ಸೌಂಡ್ ಸಿಸ್ಟಮ್ ಬಳಕೆ ಮಾಡದಂತೆ ಎಲ್ಲ ಗಣೇಶೋತ್ಸವ ಮಂಡಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಮೆರವಣಿಗೆ ಮಾರ್ಗದಲ್ಲಿ ಆಸ್ಪತ್ರೆಗಳು ಅಧಿಕ ಸಂಖ್ಯೆಯಲ್ಲಿರುವ ಹಿನ್ನೆಲೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ವಿಸರ್ಜನೆ ಮಾರ್ಗದ ಉದ್ದಕ್ಕೂ ಗುರುತಿಸಿರುವ 4 ಸಾವಿರ ಸಾರ್ವಜನಿಕ ಸಿಸಿಟಿವಿಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ, ಹೆಚ್ಚಿನ ಜನಸಂದಣಿ ಸೇರುವ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಲು ಹೆಚ್ಚುವರಿಯಾಗಿ 600 ಸಿಸಿಟಿವಿಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ. ಎಲ್ಲ ಗಣೇಶ ಮಂಟಪಗಳಿಗೆ ಆಯಾ ಮಂಡಳಗಳೇ ಸಿಸಿಟವಿ ಅಳವಡಿಸುವಂತೆ ವಿನಂತರಿಸಲಾಗಿದೆ. ಕೆಲವರು ಸಮ್ಮತಿಸಿದರೆ, ಇನ್ನೂ ಕೆಲವರು ನಿರಾಕರಿಸಿದ್ದಾರೆ. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಭದ್ರತೆಗಾಗಿ ವಿವಿಧ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ಕರೆಯಿಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಶಬ್ದ ಮಾಲೀನ್ಯ ನಿಯಂತ್ರಿಸುವ ಉದ್ದೇಶದಿಂದ ವಿಸರ್ಜನೆ ಮೆರವಣಿಗೆ ದಿನ ರಾತ್ರಿ 10 ಗಂಟೆಯಿಂದಲೇ ಸೌಂಡ್ ಸಿಸ್ಟಮ್ ಬಳಕೆ ಸಂಪೂರ್ಣ ನಿಷೇಧಿಸುವ ಕುರಿತು ಚರ್ಚಿಸಲಾಗಿದೆ. ಇನ್ನೋಂದು ಬಾರಿ ಗಣೇಶ ಮಂಡಳ ಜತೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ವಿಸರ್ಜನೆ ದಿನ ಮಂಟಪದಿಂದ ಗಣೇಶ ಮೂರ್ತಿ ತೆಗೆದುಕೊಂಡು ಹೋಗುವ ಕುರಿತು ಸೂಕ್ಷ ಪ್ರದೇಶಗಳಲ್ಲಿರುವ ಗಲ್ಲಿಗಳಲ್ಲಿ ಗಣೇಶ ಮಂಡಗಳ ಮುಖಂಡರು, ಸ್ಥಳೀಯ ಜತೆಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

............

ಬಾಕ್ಸ್

ಪಾರ್ಕಿಂಗ್ ಪರ್ಯಾಯ ವ್ಯವಸ್ಥೆ

ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೀಕ್ಷಿಸಲು ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಜನರಿಗೆ ಭದ್ರತೆ ಜತೆಗೆ ವಾಹನಗಳ ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸರ್ದಾರ ಮೈದಾನ, ಹಳೆ ಪಿಬಿ ರಸ್ತೆಯ ದಂಡು ಮಂಡಳಿ ಪ್ರದೇಶ ಸೇರಿ ಮೆರವಣಿಗೆ ಮಾರ್ಗದ ಸಮೀಪದಲ್ಲಿಯೇ ಸೌಲಭ್ಯ ಕಲ್ಪಿಸಬೇಕು. ಅಂದು ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಬೇಕು. ರಾತ್ರಿ ಸಮಯದಲ್ಲಿ ವ್ಯಾಪಾರ ವಹಿವಾಟಿಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಗಣೇಶೋತ್ಸವ ಮಹಾಮಂಡಳಗಳ ಮುಖಂಡರು ಆಗ್ರಹಿಸಿದ್ದಾರೆ.