ಜಿಲ್ಲೆ

ತವರು ಜಿಲ್ಲೆ ಮೈಸೂರಿಗೆ ಸಿಎಂ ಭರಪೂರ ಕೊಡುಗೆ; ಆರೋಗ್ಯ, ಶಿಕ್ಷಣ ರಂಗಕ್ಕೆ ಹೆಚ್ಚಿನ ಒತ್ತು

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಆರ್ಥಿಕ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ತವರು ಜಿಲ್ಲೆ ಮೈಸೂರಿಗೆ ಭರಪೂರ ಕೊಡುಗೆಯನ್ನು ನೀಡುವ ಮೂಲಕ ಸಂತೃಪ್ತಿಗೊಳಿಸಲು ಪ್ರಯತ್ನಿಸಿದ್ದಾರೆ.

ಸಿಎಂ ಜಿಲ್ಲೆಯ ಕೆಲ ಆಶೋತ್ತರಗಳಿಗೆ ಸ್ಪಂದನೆ ಮಾಡಿದ್ದರೆ, ಇನ್ನಷ್ಟು ನಿರೀಕ್ಷೆಗಳಿಗೆ ಮನ್ನಣೆ ಕೊಟ್ಟಿಲ್ಲ. ಹಳೇ ಘೋಷಣೆಗಳ ಜಾರಿ ಕುರಿತು ಸಹ ಪ್ರಸ್ತಾವನೆ ಮಾಡಿಲ್ಲ. ಆರೋಗ್ಯ, ಶಿಕ್ಷಣ ಹೆಚ್ಚಿನ ಒತ್ತು ನೀಡಿದ್ದಾರೆ. ಈ ಹಿಂದಿನ ಕೆಲ ಘೋಷಣೆಗಳಿಗೂ ಮತ್ತೆ ಜೀವ ಕೊಟ್ಟಿದ್ದಾರೆ.

ಮಹಾರಾಣಿ ಕಾಲೇಜಿಗೆ ನೆರವು:

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಕಟ್ಟಡ ನಿರ್ಮಾಣಕ್ಕೆ 54 ಕೋಟಿ ರೂ. ಹಾಗೂ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 116 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಕಳೆದ ವರ್ಷ ಮಹಾರಾಜ ವಿಜ್ಞಾನ ಕಾಲೇಜಿನ ಪ್ರಯೋಗಾಲಯದ ಕೊಠಡಿ ಕುಸಿದಿತ್ತು. ಪುರಾತನವಾದ ಈ ಕಟ್ಟಡವೂ ಶಿಥಿಲಗೊಂಡಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಕಾಲೇಜಿನ ಆವರಣದಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಹಸಿರುನಿಶಾನೆ ತೋರಲಾಗಿದೆ. ಹಾಸ್ಟೆಲ್ ಸಮಸ್ಯೆಗೂ ಪರಿಹಾರ ಸೂಚಿಸಲಾಗಿದೆ.

ಕೆ.ಆರ್.ಆಸ್ಪತ್ರೆಯಲ್ಲಿ ಒಪಿಡಿ ನಿರ್ಮಾಣ:

ಸ್ಥಳೀಯ ಆರೋಗ್ಯ ಸೇವೆ ಸುಧಾರಣೆಗೆ ಈ ಸಲವೂ ಕಾಳಜಿ ತೋರಿದ್ದಾರೆ. ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಶತಮಾನೋತ್ಸವದ ನೆನಪಿಗಾಗಿ ಕೆ.ಆರ್.ಆಸ್ಪತ್ರೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಇದರಿಂದ ಮೈಸೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ರೋಗಿಗಳಿಗೂ ಅನುಕೂಲವಾಗಲಿದೆ.

ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ನಗರದಲ್ಲಿ ಆಧುನಿಕ ತುರ್ತು ಆರೈಕೆ ಕೇಂದ್ರ (ಕ್ರಿಟಿಕಲ್ ಕೇರ್ ಬ್ಲಾಕ್) ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾವುದು ಎಂದು ಭರವಸೆ ನೀಡಿದ್ದಾರೆ.

ನೆಫ್ರೋ-ಮೂತ್ರಶಾಸ್ತ್ರ ಆಸ್ಪತ್ರೆ ಮೇಲ್ದರ್ಜೆಗೆ

ಮೈಸೂರಿನಲ್ಲಿರುವ ನೆಫ್ರೋ-ಮೂತ್ರಶಾಸ್ತ್ರ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. 40ರಿಂದ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಉನ್ನತೀಕರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮೈಸೂರು ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಶೀತಲಗೃಹ ನಿರ್ಮಿಸಲಾಗುತ್ತಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜೈವಿಕ ಸಿಎನ್‌ಜಿ ಸ್ಥಾವರ ಸ್ಥಾಪಿಸುವ ಮೂಲಕ ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಾಗುತ್ತಿದೆ.

ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆ ಅಭಿವೃದ್ಧಿ:

ಪಾರಂಪರಿಕ ಲ್ಯಾನ್ಸ್‌ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲೇ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುತ್ತಿದೆ. ಈ ಹಿಂದೆಯೂ ಸಿದ್ದರಾಮಯ್ಯ ಈ ಉಭಯ ಕಟ್ಟಡ ಅಭಿವೃದ್ಧಿಗೆ 100 ಕೋಟಿ ರೂ. ಘೋಷಿಸಿದ್ದು, ಬಳಿಕ ಅದು ಕಾರ್ಯರೂಪಕ್ಕೆ ಬರಲಿಲ್ಲ. ಇದೀಗ ಮತ್ತೆ ಈ ವಿಷಯ ಬಜೆಟ್‌ನಲ್ಲಿ ಮುನ್ನೆಲೆಗೆ ಬಂದಿದೆ. ಆದರೆ, ಈ ಸಲ ಎಷ್ಟು ಮೀಸಲಿಡಲಾಗಿದೆ ಎಂಬುದನ್ನು ತಿಳಿಸಿಲ್ಲ. ಇದು ಮೂಲ ಕಟ್ಟಡಗಳನ್ನು ಉಳಿಸಿಕೊಂಡು ಜೀರ್ಣೋದ್ಧಾರವೋ ಎಂಬುದು ಸ್ಪಷ್ಟವಾಗಿಲ್ಲ.

ಪಾಲಿಕೆಗೆ 200 ಕೋಟಿ ರೂ.

ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 2,000 ಕೋಟಿ ರೂ. ಘೋಷಿಸಿದ್ದು, ಇದರಲ್ಲಿ ಮೈಸೂರು ಮಹಾನಗರಪಾಲಿಕೆಗೂ 200 ಕೋಟಿ ರೂ. ಸಿಗಲಿದೆ.

ಪೆರಿಫೆರಲ್ ರಿಂಗ್ ರಸ್ತೆ ವರದಿ ತಯಾರಿ:

ಮೈಸೂರಿನಲ್ಲಿ ಜನದಟ್ಟಣೆ ಹೆಚ್ಚುತ್ತಿರುವುದರಿಂದ ರಿಂಗ್ ರಸ್ತೆಯ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಹೊರವಲಯದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಕ್ರಮ ವಹಿಸಲಾಗುವುದು.

ಇದು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಥವಾ ಟೌನ್ ಪ್ಲಾೃನಿಂಗ್ ಮಾದರಿಯಲ್ಲಿ ನಿರ್ಮಿಸಲು ಕಾರ್ಯಸಾಧ್ಯತಾ ವರದಿಯಾಗಿದೆ. ನಗರ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ಅಭಿವೃದ್ಧಿಪಡಿಸಲಾಗುವುದು.

ಮೇಲ್ಸೇತುವೆ ನಿರ್ಮಾಣ:

ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದಲ್ಲಿ ಇದು ನಿರ್ಮಾಣವಾಗಲಿದೆ. ಕುಕ್ಕರಹಳ್ಳಿ ಬಳಿ ಹಾಗೂ ಕೆ.ಆರ್.ಎಸ್. ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೂ ಹಣ ಕಾಯ್ದಿಡಲಾಗಿದೆ. ಹಳೆಯ ಬೇಡಿಕೆಗೆ ಕೊನೆಗೂ ಸಿಎಂ ಸ್ಪಂದಿಸಿದ್ದಾರೆ.

ರನ್‌ವೇ ವಿಸ್ತರಣೆಗೂ ಹಣ:

ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಸ್ವಾಧೀನಕ್ಕೆ 126 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಬಾಕಿ 43 ಕೋಟಿ ರೂ. ಬಿಡುಗಡೆಗೊಳಿಸಿ, ಕಾಮಗಾರಿ ಪ್ರಾರಂಭಕ್ಕೆ ಕ್ರಮ ವಹಿಸಲಾಗುವುದು ಎಂದು ಸಿಎಂ ಆಶ್ವಾಸನೆ ನೀಡಿದ್ದಾರೆ.

ಜವಳಿ ಪಾರ್ಕ್ ನಿರ್ಮಾಣ:

ಮೈಸೂರು ವಿಭಾಗದಲ್ಲಿ ನೂತನ ಜವಳಿ ಪಾರ್ಕ್ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಇದು ಕಾರ್ಯಗತವಾದರೆ ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ ಮತ್ತು ತಾರಾಲಯವನ್ನು ಹೊಸದಾಗಿ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಿದ್ದು, ಈಗಾಗಲೇ ತಾರಾಲಯ ಕಟ್ಟಡ ನಿರ್ಮಾಣವಾಗುತ್ತಿದೆ. ಇದು ಯಾವುದು ಎಂಬ ಪ್ರಶ್ನೆ ಮೂಡಿದೆ.

ಹುಣಸೂರು ತಾಲೂಕಿನ ಮರದೂರು ಕೆರೆ ತುಂಬಿಸುವ ಯೋಜನೆ, ಕೆ.ಆರ್.ನಗರ ತಾಲೂಕಿನ ಕೆಸ್ತೂರುಕೊಪ್ಪಲು ಏತ ನೀರಾವರಿ ಯೋಜನೆಗೂ ಹಣ ಇಟ್ಟಿದ್ದಾರೆ. ಹುಣಸೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗುತ್ತಿದೆ. ಅಪೂರ್ಣವಾಗಿರುವ ಮೈಸೂರಿನ ವಕೀಲರ ಭವನವನ್ನು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಕಬಿನಿಯಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್

ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಬಿನಿ, ಬಂಡೀಪುರ ಸೇರಿದಂತೆ ದಾಂಡೆಲಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್‌ಗಳನ್ನು ಜೆ.ಎಲ್.ಆರ್. ಸಂಸ್ಥೆಯ ಮೂಲಕ ನಿರ್ಮಾಣ ಮಾಡಲಾಗುತ್ತಿದೆ.

ವರುಣಕ್ಕೆ ಸಿಎಂ ಕೃಪೆ

ಸಿಎಂ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರಕ್ಕೂ ಉದಾರ ಕೊಡುಗೆ ನೀಡಿದ್ದು, ಕಾವೇರಿ ನೀರಾವರಿ ನಿಗಮದಡಿ ವರುಣ ಕ್ಷೇತ್ರದಲ್ಲಿ ನಾಲೆಗಳ ಅಭಿವೃದ್ಧಿ, ನಂಜನಗೂಡು ತಾಲೂಕಿನ ದೇವನೂರು ಬಳಿಯ ಏತ ನೀರಾವರಿ ಯೋಜನೆಗೂ ಹಣ ಇಟ್ಟಿದ್ದಾರೆ.

ಕೌಶಲಾಭಿವೃದ್ಧಿ ಇಲಾಖೆಯಿಂದ ವರುಣದಲ್ಲಿ ಜಿ.ಟಿ.ಟಿ.ಸಿ. ಬಹು ಕೌಶಲಾಭಿವೃದ್ಧಿ ಕೇಂದ್ರವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ಕಲಬುರಗಿ, ಕೊಪ್ಪಳದಲ್ಲಿ ಈ ಕೇಂದ್ರ ಸ್ಥಾಪನೆಗೆ 350 ಕೋಟಿ ರೂ.ವೆಚ್ಚ ಮಾಡುತ್ತಿದ್ದು, ಮೊದಲನೇ ಹಂತದ ಯೋಜನೆಯನ್ನು 3 ವರ್ಷಗಳ ಅವಧಿಯಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆ ಪ್ರೋತ್ಸಾಹಕ್ಕಾಗಿ ಕ್ರಮ ವಹಿಸಲಾಗುವುದು ಎಂದೂ ಸಿಎಂ ತಿಳಿಸಿದ್ದಾರೆ. ಈ ಎಲ್ಲ ಕಾರ್ಯಗಳ ಮೂಲಕ ತಮ್ಮ ಕ್ಷೇತ್ರದ ಜನರ ಋಣ ತೀರಿಸುತ್ತಿದ್ದಾರೆ.


ಜಿಲ್ಲೆಗೆ ಸಿಕ್ಕಿದ್ದು ಏನು?

  • ಆಧುನಿಕ ತುರ್ತು ಆರೈಕೆ ಕೇಂದ್ರ (ಕ್ರಿಟಿಕಲ್ ಕೇರ್ ಬ್ಲಾಕ್) ನಿರ್ಮಾಣ
  • ನೆಫ್ರೋ-ಮೂತ್ರಶಾಸ್ತ್ರ ಆಸ್ಪತ್ರೆ ಮೇಲ್ದರ್ಜೆಗೆ, ಹ್ಯೂಮನ್ ಮಿಲ್ಕ್ ಬ್ಯಾಂಕ್ ಘಟಕ ಸ್ಥಾಪನೆ
  • ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲೇ ಅಭಿವೃದ್ಧಿ
  • ಮೈಸೂರು ಮಹಾನಗರಪಾಲಿಕೆಗೆ 200 ಕೋಟಿ ರೂ.
  • ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲು ಕ್ರಮ
  • ಮಣಿಪಾಲ್ ಆಸ್ಪತ್ರೆಯ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣ
  • ಕುಕ್ಕರಹಳ್ಳಿ ಬಳಿ, ಕೆ.ಆರ್.ಎಸ್.ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ
  • ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಬಾಕಿ 43 ಕೋಟಿ ರೂ. ಬಿಡುಗಡೆಗೊಳಿಸಿ, ಕಾಮಗಾರಿ ಪ್ರಾರಂಭಕ್ಕೆ ಕ್ರಮ
  • ಕಬಿನಿಯಲ್ಲಿ ಇಂಟರ್‌ಪ್ರಿಟೇಷನ್ ಸೆಂಟರ್ ನಿರ್ಮಾಣ
  • ಎಪಿಎಂಸಿಯಲ್ಲಿ 40 ಕೋಟಿ ರೂ.ದಲ್ಲಿ ಶೀತಲಗೃಹ ನಿರ್ಮಾಣ
  • ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಯನ್ನಾಗಿ ರೂಪಿಸಲು ಜೈವಿಕ ಸಿಎನ್‌ಜಿ ಸ್ಥಾವರ ಸ್ಥಾಪನೆ
  • ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ ನಿರ್ಮಾಣಕ್ಕೆ 54 ಕೋಟಿ ರೂ., ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 116 ಕೋಟಿ ರೂ.
  • ಕೆ.ಆರ್.ಆಸ್ಪತ್ರೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ