ಬೆಳಗಾವಿ: ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರ ಆಗಿರುವುದು ನನಗೆ ಗೊತ್ತಿಲ್ಲ. ಅದು ಮುಖ್ಯಮಂತ್ರಿ ಅವರ ತೀರ್ಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ, ಕಾರ್ಯಕ್ರಮವನ್ನು ಮೈಸೂರಿಗೆ ಸ್ಥಳಾಂತರಿಸಿರುವ ಕುರಿತು ಮುಖ್ಯಮಂತ್ರಿ ಅಥವಾ ಹೈಕಮಾಂಡ್ ಕಾರಣ ನೀಡಬೇಕು. ಮುಖ್ಯಮಂತ್ರಿಗಿಂತ ನಾವು ದೊಡ್ಡವರಲ್ಲ ಎಂದರು.
ಸಿಎಂ ಅವರು ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಕ್ಕೆ ನಿರ್ಧರಿಸಿದ್ದಾರೆ. ಆ ದಿನವೇ ವಯನಾಡ್‌ನಲ್ಲಿ ರಾಹುಲ್ ಗಾಂಧಿ ಅವರ ಕಾರ್ಯಕ್ರಮವೂ ನಿಗದಿಯಾಗಿದ್ದು, ಅವರಿಗೂ ಆಗಮಿಸಲು ಅನುಕೂಲವಾಗುವಂತೆ ಗೃಹಲಕ್ಷ್ಮೀ ಕಾರ್ಯಕ್ರಮವನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ನಾವೇ ಬೇಟೆಯಾಡುತ್ತೇವೆ:
ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಯಾರು ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಹಿತಿ ನನಗಿಲ್ಲ. ಜಿಲ್ಲೆಯ ಯಾವೊಬ್ಬ ಬಿಜೆಪಿ ನಾಯಕರೂ ಸದ್ಯ ಕಾಂಗ್ರೆಸ್‌ಗೆ ಬರುತ್ತಿಲ್ಲ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದ ಶಾಸಕರನ್ನು ಮರಳಿ ನಮ್ಮ ಪಕ್ಷಕ್ಕೆ ಕರೆಯಿಸಿಕೊಳ್ಳುವ ಅನಿವಾರ್ಯತೆ ಇಲ್ಲ. ಆದರೆ, ಅವರು ಬರುತ್ತಾರೆ ಎಂದರೆ ಅಭ್ಯಂತರವಿಲ್ಲ ಎಂದರು. ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ನಾಯಕರನ್ನು ಬಿಜೆಪಿಯತ್ತ ಸೆಳೆಯುವುದಾಗಿ ಸಿ.ಟಿ.ರವಿ ನೀಡಿದ ಹೇಳಿಕೆ ತಳ್ಳಿಹಾಕಿದ ಸತೀಶ, ಈಗ ಕಾಂಗ್ರೆಸ್ ಶಾಸಕರನ್ನು ಬೇಟೆಯಾಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ನಮ್ಮ ಪಕ್ಷವೇ ವಿರೋಧ ಪಕ್ಷದ ಶಾಸಕರನ್ನು ಬೇಟೆಯಾಡುವ ಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಡಿದರು.
ಎಲ್ಲರಿಗೂ ಹುದ್ದೆ ಸಿಗಲ್ಲ:
ಶಾಸಕರು, ಮಾಜಿ ಶಾಸಕರು ಸೇರಿ ಪಕ್ಷದ ಎಲ್ಲ ಕಾರ್ಯಕರ್ತರನ್ನು ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ. ನಿಗಮ, ಮಂಡಳಿಗಳಿಗೆ ಸುಮಾರು 100 ಹುದ್ದೆಗಳಿರಬಹುದು. ಆದರೆ, ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಹಾಗಾಗಿ, ಕೆಲವರಿಗೆ ಹುದ್ದೆ ಸಿಗಬಹುದು. ಇನ್ನೂ ಕೆಲವರಿಗೆ ಸಿಗದಿರಬಹುದು ಎಂದು ಸತೀಶ ಮಾಹಿತಿ ನೀಡಿದರು.
20 ಸ್ಥಾನ ಗೆಲ್ಲುವುದೇ ಗುರಿ:
ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಆಸಕ್ತಿ ತೋರಿದ್ದಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸೆಪ್ಟೆಂಬರ್ ಮೊದಲ ವಾರ 2-3 ಸಭೆ ನಡೆಸಲಾಗುವುದು. ಈ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನಗಳನ್ನು ಗೆಲ್ಲುವುದೇ ನಮ್ಮ ಗುರಿ ಎಂದು ಪ್ರತಿಕ್ರಿಯಿಸಿದರು.