ಜಿಲ್ಲೆ

26ಕ್ಕೆ ಬೆಳಗಾವಿಗೆ ಸಿದ್ದರಾಮಯ್ಯ ಆಗಮನ

ಮಂಜುನಾಥ ಕೋಳಿಗುಡ್ಡ

ಗೋಕಾಕ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.26ರಂದು ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಆ.26ರಂದು ಬೆಳಗ್ಗೆ 10.30ಕ್ಕೆ ವಿಶೇಷ ವಿಮಾನ ಮೂಲಕ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ತದನಂತರ ಬೆಳಗಾವಿ-ಬಾಗಲಕೋಟೆ ಹೆದ್ದಾರಿ, ಯರಗಟ್ಟಿ, ಸತ್ತಿಗೇರಿ, ಹುಲಕುಂದ ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ಕೌಜಲಗಿ ಗ್ರಾಮಕ್ಕೆ ಆಗಮಿಸಲಿದ್ದಾರೆ. ಬಳಿಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಹಾಗೂ ಕೋಟೆ ಉದ್ಘಾಟನೆ ಮಾಡಲಿದ್ದಾರೆ. ಅಲ್ಲಿಂದ ಕಳ್ಳಿಗುದ್ದಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ಯಾದವಾಡ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಅಶೋಕ ಪಟ್ಟಣ, ವಿಶ್ವಾಸ ವೈದ್ಯ,ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಸೇರಿ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

savimanjunath