ಜಿಲ್ಲೆ

ರಸ್ತೆಗಳಿಗೆ ಕಾಂಕ್ರೀಟ್ ಕಾಮಗಾರಿ - ಪುತ್ತೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಆಗ್ರಹ

Mangaluru - Nishantha Narayana

ಪುತ್ತೂರು: ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ರಸ್ತೆಗಳಿಗೆ ಇಂಟರ್‌ಲಾಕ್ ನಿಲ್ಲುವುದಿಲ್ಲ, ಕಾಂಕ್ರೀಟ್ ಹಾಕುವ ಕಾರ್ಯವಾಗಬೇಕು. ಇನ್ನೂ ಕೆಲವು ಭಾಗದಲ್ಲಿ ರಸ್ತೆ ಹಾಳಾಗಿದ್ದು, ಅಲ್ಲಿಗೂ ಸರಿಯಾದ ವ್ಯವಸ್ಥೆ ಮಾಡಬೇಕು. ರಸ್ತೆಬದಿ ಗಿಡಗಂಟಿ ತುಂಬಿ ಕಾಡು ಬೆಳೆಯುವುದನ್ನು ತೆರವು ಮಾಡುತ್ತಿಲ್ಲ. ಇದನ್ನು ಸ್ಥಳೀಯವಾಗಿ ಸಣ್ಣ ಸಣ್ಣ ಗುತ್ತಿಗೆ ಮೂಲಕ ತೆಗೆಸುವ ಕಾರ್ಯ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ದರ್ಬೆ ಸರ್ಕಲ್‌ನಲ್ಲೇ ರಾತ್ರಿ ತಳ್ಳುಗಾಡಿ, ಲಾರಿ ಇಟ್ಟು ವ್ಯಾಪಾರ ಮಾಡುವುದರಿಂದ ಇತರ ವಾಹನಗಳಿಗೆ ಸಮಸ್ಯೆಯಾಗಿದೆ. ಬೆಳಗ್ಗಿನ ವೇಳೆ ಪೊಲೀಸರು ವಾಹನಗಳನ್ನು ತೆಗೆಸುತ್ತಾರೆ, ರಾತ್ರಿ ಯಾರೂ ಇಲ್ಲದ ಕಾರಣ ರಸ್ತೆಗಳನ್ನು ಆಕ್ರಮಿಸಿಕೊಳ್ಳಲಾಗುತ್ತಿದೆ. ಇದಕ್ಕೆ ನಗರ ಸಭೆಯಿಂದ ಸೂಕ್ತಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂತು.

೧೮೬೪ ಉದ್ಯಮ ಪರವಾನಗಿ ನವೀಕರಣಕ್ಕೆ ಬಾಕಿಯಿದ್ದು, ಪರಿಶೀಲಿಸುವ ಕಾರ್ಯವಾಗಬೇಕು. ಅಂಗಡಿ ಹಾಗೂ ಗೂಡಂಗಡಿಯವರಿಗೆ ಒಂದೇ ರೀತಿಯ ಕಸದ ತೆರಿಗೆ ಮಾಡುವುದು ಸರಿಯಲ್ಲ. ನಗರಸಭೆಯಿರುವುದು ಸೇವೆ ನೀಡುವುದಕ್ಕೆ, ಜನರಿಂದ ವಸೂಲಿಗಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಸದಸ್ಯರು ಹೇಳಿದರು.

ನೀರಿನ ಕರ ಕಟ್ಟದ ೫೦೦ಕ್ಕೂ ಅಧಿಕ ಬಳಕೆದಾರರಿಗೆ ನೋಟಿಸ್ ನೀಡಲಾಗಿದೆ. ಸುಮಾರು ೨೦೦ರಷ್ಟು ಸಂಪರ್ಕ ಕಡಿತಕ್ಕೆ ಕ್ರಮ ಕೈಗೊಳ್ಳಲಾಗಿದೆ. ಉದ್ಯಮ ಪರವಾನಗಿ ವಸೂಲಾತಿಗಾಗಿ ಎರಡು ಮಂದಿಯನ್ನು ನಿಯೋಜಿಸಲಾಗಿದೆ. ನಗರದಲ್ಲಿ ಯುಜಿಡಿ ವ್ಯವಸ್ಥೆಯಾಗದ ಕಾರಣ ರಸ್ತೆಗೆ ಕಾಂಕ್ರಿಟ್‌ಗೆ ವ್ಯವಸ್ಥೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಉಪಾಧ್ಯಕ್ಷ ಬಾಲಚಂದ್ರ ಕೆ., ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ, ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಉಪಸ್ಥಿತರಿದ್ದರು.

ಗುಣಮಟ್ಟವಿಲ್ಲದ ಕಾಮಗಾರಿ!

ಚರಂಡಿ ದುರಸ್ತಿ ಎಲ್ಲ ಕಡೆ ಅರ್ಧ ಅರ್ಧ ಮಾತ್ರ ನಡೆಯುತ್ತಿದೆ. ಕಡಿಮೆಗೆ ಟೆಂಡರ್ ಹಾಕಿ, ಸ್ವಲ್ಪ ಕೆಲಸ ಮಾಡುತ್ತಿದ್ದಾರೆ. ಬೊಳುವಾರು ಮಂಜಳಪಡ್ಪು ನಡುವೆ ನಗರೋತ್ಥಾನದಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದ್ದು, ಸಂಪೂರ್ಣ ಕಿತ್ತುಹೋಗಿದೆ. ಈಗ ಅದನ್ನು ಮರು ಡಾಂಬರೀಕರಣ ಮಾಡಿಕೊಡಲು ಸೂಚಿಸಬೇಕು. ಚರಂಡಿ ಮೇಲೆ ಅಳವಡಿಸುವ ಸ್ಲ್ಯಾಬ್ ಗುಣಮಟ್ಟವಿಲ್ಲ ಈ ಬಗ್ಗೆ ಸರಿಯಾಗಿ ಪರಿಶೀಲಿಸುವ ಕಾರ್ಯವಾಗಬೇಕು ಎಂದು ಸದಸ್ಯರು ಹೇಳಿದರು.

ನಿಲ್ಲದ ಜಲಸಿರಿ ಗೋಳು!

ಜಲಸಿರಿಯವರು ರಸ್ತೆಯಲ್ಲಿ ತೆಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚುವ ಕಾರ್ಯ ಮಾಡುತ್ತಿಲ್ಲ. ಬಪ್ಪಳಿಗೆ ಭಾಗದಲ್ಲಿ ನಿರಂತರವಾಗಿ ಪೈಪ್ ಒಡೆಯುತ್ತಿದೆ. ಇದರಿಂದ ಜನರಿಗೆ ಹಲವು ದಿನಗಳ ಕಾಲ ನೀರಿಲ್ಲದಂತಾಗುತ್ತಿದೆ. ಹೊಸದಾಗಿ ಪೈಪ್ ಅಳವಡಿಸಿದ್ದರೂ ಮತ್ತೆ ಸಮಸ್ಯೆ ಎದುರಾಗುವುದು ಹೇಗೆ? ಪ್ರೆಶರ್ ಕಂಟ್ರೋಲ್ ಮಾಡಿದರೆ ಸಮಸ್ಯೆ ಸರಿಪಡಿಸಬಹುದು. ಇದಕ್ಕಾಗಿ ಹೊಸ ಪೈಪ್‌ಲೈನ್ ಮಾಡುವ ಅವಶ್ಯಕತೆಯಿಲ್ಲ. ಒಂದು ಮನೆಗೆ ನೀರಿನ ಸಂಪರ್ಕ ಇಲ್ಲ ಎಂಬ ಸಣ್ಣ ವಿಚಾರ ಸಭೆಯ ತನಕ ಬರದೆ ತಕ್ಷಣ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.