ಜಿಲ್ಲೆ

2.30 ಲಕ್ಷ ಕೋಟಿ ರೂ. ಮೊತ್ತದ ಸಮಗ್ರ ಚಲನಶೀಲ ಯೋಜನೆ ಅನುಷ್ಠಾನಕ್ಕೆ ಶೀಘ್ರ ಚಾಲನೆ

malli

ಬೆಂಗಳೂರು:  ನಗರದ ಸಂಚಾರದಟ್ಟಣೆ ನಿವಾರಣೆ ಮತ್ತು ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಬಿಎಂಆರ್​ಸಿಎಲ್ ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯ ರೂಪಿಸಿರುವ 2.30 ಲಕ್ಷ ಕೋಟಿ ರೂ. ಮೊತ್ತದ ಸಮಗ್ರ ಚಲನಶೀಲ ಯೋಜನೆ ಜಾರಿಗೆ ಇನ್ನೊಂದು ತಿಂಗಳಲ್ಲಿ ಚಾಲನೆ ದೊರೆಯಲಿದೆ.

ಮುಂದಿನ 20 ವರ್ಷದಲ್ಲಿ ಬೆಂಗಳೂರಿನ ಜನಸಂಖ್ಯೆ 3 ಕೋಟಿಗೆ ತಲುಪಲಿದೆ. ಅದರಂತೆ ವಾಹನಗಳ ಸಂಖ್ಯೆ ಅಂದಾಜು 2 ಕೋಟಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ ಸಂಚಾರದಟ್ಟಣೆ ನಿಯಂತ್ರಣ, ಮೋಟಾರು ವಾಹನಗಳ ಬಳಕೆ ತಗ್ಗಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಅದರಂತೆ ಇದೀಗ ಬಿಎಂಆರ್​ಸಿಎಲ್ ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯ ಸಮಗ್ರ ಚಲನಶೀಲ ಯೋಜನೆ (ಕಾಂಪ್ರಹೆನ್ಸಿವ್ ಮೊಬಿಲಿಟಿ ಪ್ಲಾನ್) ರೂಪಿಸಿವೆ. ಒಟ್ಟು ಮೂರು ಹಂತದಲ್ಲಿ ಸಮೂಹ ಸಾರಿಗೆಗೆ ಒತ್ತು ನೀಡುವುದು, ಮೋಟಾರುರಹಿತ ಸಾರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ಆ ಯೋಜನೆಗಳಿಗಾಗಿ 2.30 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

420 ಆಕ್ಷೇಪಣೆ: ಬಿಎಂಆರ್​ಸಿಎಲ್ ತನ್ನ ವೆಬ್​ಸೈಟ್​ನಲ್ಲಿ ಡಿಸೆಂಬರ್​ನಲ್ಲಿ ಯೋಜನೆಯ ಮಾಹಿತಿ ಪ್ರಕಟಿಸಿತ್ತು. ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಜ.6ರವರೆಗೆ ಅವಕಾಶ ನೀಡಿತ್ತು. ಆದರೆ, ಹೆಚ್ಚಿನ ಪ್ರತಿಕ್ರಿಯೆ ಬಾರದ ಕಾರಣ, ಆಕ್ಷೇಪಣೆ ಸಲ್ಲಿಕೆ ಗಡುವನ್ನು ಜ.20ಕ್ಕೆ ವಿಸ್ತರಿಸಿತ್ತು. ಈ ಅವಧಿಯಲ್ಲಿ 110 ಜನ ಪತ್ರದ ಮೂಲಕ ಮತ್ತು 310 ಮಂದಿ ಈಮೇಲ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲ 420 ಅಭಿಪ್ರಾಯಗಳನ್ನು ಡಲ್ಟ್ ಮತ್ತು ಬಿಆರ್​ಸಿಎಲ್ ಅದಿಕಾರಿಗಳು ಪರಿಶೀಲಿಸಲಿದ್ದಾರೆ. ಬಳಿಕ ಅವನ್ನು ಸರ್ಕಾರಕ್ಕೆ ಸಲ್ಲಿಸಲಿದ್ದು, ನಂತರದಲ್ಲಿ ಸರ್ಕಾರ ಯೋಜನೆ ಅನುಷ್ಠಾನದ ಕುರಿತು ನಿರ್ಧರಿಸಲಿದೆ.

ಎಲಿವೇಟೆಡ್ ಕಾರಿಡಾರ್​ಗೆ ವಿರೋಧ: ಸಮಗ್ರ ಚಲನಶೀಲ ಯೋಜನೆಯಲ್ಲಿ 92 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ವಣದ ಪ್ರಸ್ತಾವನೆ ಇದೆ. ಈ ಹಿಂದೆ ಎಲಿವೇಟೆಡ್ ಕಾರಿಡಾರ್​ಗೆ ಸಾಕಷ್ಟು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಹೀಗಾಗಿ ಯೋಜನೆಯನ್ನು ಕೈಬಿಡಲಾಗಿತ್ತು. ಇದೀಗ ಸಿಎಂಪಿಯಲ್ಲಿ ಮತ್ತೆ ಎಲಿವೇಟೆಡ್ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಅದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಮಾಹಿತಿಗೆ ಆಗ್ರಹ: ಸಿಎಂಪಿ ಕುರಿತು ಕನ್ನಡದಲ್ಲಿ ಮಾಹಿತಿ ನೀಡಬೇಕು, ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂಬುದು ಸೇರಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಅವೆಲ್ಲವನ್ನೂ ಅಧಿಕಾರಿಗಳು ಅಧಿಕಾರಿಗಳು ಸರ್ಕಾರದ ಅವಗಾಹನೆಗೆ ಕಳುಹಿಸಲಿದ್ದಾರೆ. ೆ

ಅನುಷ್ಠಾನಕ್ಕಾಗಿ ಶಿಫಾರಸು

ಸಮಗ್ರ ಚಲನಶೀಲ ಯೋಜನೆಯಲ್ಲಿ ಮೂರು ಹಂತಗಳಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಶಿಫಾರಸು ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಉಪನಗರ ರೈಲು, ಮೆಟ್ರೋ ರೈಲು ಯೋಜನೆಗಳು, ಟ್ರಾನ್ಸಿಟ್ ಓರಿಯೆಂಟೆಡ್ ಡೆವೆಲಪ್​ವೆುಂಟ್, ಇಂಟರ್​ವಾಡೆಲ್ ಟ್ರಾನ್ಸಿಟ್ ಹಬ್ ಸೇರಿ ಒಟ್ಟು 80 ಯೋಜನೆಗಳು ಸೇರಿವೆ. ಆ ಯೋಜನೆಗಳಿಗೆ 2.3 ಲಕ್ಷ ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಸಮೂಹ ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಮಾಡಲು ಹೆಚ್ಚಿನ ಒತ್ತು

ಯೋಜನೆಗಳ ಅನುಷ್ಠಾನದ ಜತೆಗೆ ನಗರ ಸಾರಿಗೆ ವ್ಯವಸ್ಥೆ ಸುಧಾರಣೆಗಾಗಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ. ಒಟ್ಟು 13 ಹಂತದಲ್ಲಿ ವಿವಿಧ ಶಿಫಾರಸುಗಳನ್ನು ಮಾಡಲಾಗಿದೆ. ಅದರಲ್ಲಿ ಸಮೂಹ ಸಾರಿಗೆಗೆ ಒತ್ತು ನೀಡುವುದು ಮತ್ತು ಮೋಟಾರುರಹಿತ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಲಾಗಿದೆ. ಸೈಕಲ್ ಬಳಕೆ, ಪಾದಚಾರಿ ಮಾರ್ಗ, ಎಲೆಕ್ಟ್ರಿಕ್ ವಾಹನಗಳ ಬಳಕೆ ಸೇರಿ ಇನ್ನಿತರ ವಿಷಯಗಳನ್ನು ವಿವರಿಸಲಾಗಿದೆ.

ಪ್ರಮುಖ ಯೋಜನೆಗಳು

  • 84 ಕಿ.ಮೀ. 8 ರಸ್ತೆಗಳಲ್ಲಿ ಮೋಟಾರುರಹಿತ ಸಾರಿಗೆ ವ್ಯವಸ್ಥೆ ಜಾರಿ
  • 154 ಸ್ಕೈವಾಕ್ ನಿರ್ಮಾಣ
  • 50 ಜಂಕ್ಷನ್​ಗಳ ಅಭಿವೃದ್ಧಿ
  • 192 ಕಿ.ಮೀ. ಮುಖ್ಯರಸ್ತೆಗಳನ್ನು 6 ಪಥದ ರಸ್ತೆಗಳಾಗಿ ವಿಸ್ತರಣೆ
  • 50 ರ್ಪಾಂಗ್ ಕಟ್ಟಡ ನಿರ್ಮಾಣ
  • 548 ಕಿ.ಮೀ. ಪಾದಚಾರಿ ಮಾರ್ಗ ನಿರ್ಮಾಣ ಮತ್ತು ಅದರಲ್ಲಿ 174 ಕಿ.ಮೀ. ಸೈಕಲ್​ಪಥ ನಿರ್ಮಾಣ
  • 103 ಕಿ.ಮೀ. ಉದ್ದದ ರಸ್ತೆ ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿ
  • 550 ಬೈಸಿಕಲ್ ಶೇರಿಂಗ್ ಹಬ್ ನಿರ್ಮಾಣ
  • 6 ಅಂತರ ನಗರ ಮತ್ತು ಅಂತರರಾಜ್ಯ ಬಸ್ ನಿಲ್ದಾಣಗಳ ನಿರ್ಮಾಣ
  • 30 ಇಂಟರ್​ವಾಡೆಲ್ ಇಂಟರ್​ಚೇಂಜ್ ಹಬ್
  • ಮೆಟ್ರೋ, ರೈಲು ಮತ್ತು ಬಸ್ ನಿಲ್ದಾಣಗಳಿಗೆ ಸಂರ್ಪಸುವ 10 ಮೇಲ್ಸೇತುವೆಗಳ ನಿರ್ಮಾಣ
  • 92 ಕಿ.ಮೀ. ಎಲಿವೇಟೆಡ್ ಕಾರಿಡಾರ್