ಕಾರವಾರ/CMC Meeting: ನಗರದ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತೆ ಬಜೆಟ್ ಸಿದ್ಧಪಡಿಸಲಾಗುವುದು ಎಂದು ಅಧ್ಯಕ್ಷ ರವಿರಾಜ ಅಂಕೋಲೆಕರ್ ತಿಳಿಸಿದರು.
ನಗರಸಭೆ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರಸಭೆಗೆ ಈ ಬಾರಿ 14.60 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಮಾಡಲಾಗಿತ್ತು. ಇದುವರೆಗೆ 9.20 ಕೋಟಿ ರೂ. ಆದಾಯ ದಾಖಲಾಗಿದೆ. ಈ ಆರ್ಥಿಕ ವರ್ಷದ 3 ತಿಂಗಳಲ್ಲಿ ಯೋಜಿತ ಗುರಿ ತಲುಪುವ ನಿರೀಕ್ಷೆ ಇದೆ.
ಮುಂದಿನ ಬಾರಿ ಇದಕ್ಕಿಂತ ಹೆಚ್ಚಿನ ಗುರಿ ನಿಗದಿ ಮಾಡಿಕೊಂಡು, ಅದಕ್ಕೆ ತಕ್ಕಂತೆ ಆದಾಯ ವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇವೆ ಎಂದರು.
ನಗರದ ಟ್ಯಾಗೋರ್ ಕಡಲ ತೀರ ಸ್ವಚ್ಛತೆ ನಗರಸಭೆ ನೋಡಿಕೊಳ್ಳುತ್ತಿದೆ. ಆದರೆ, ಅಲ್ಲಿನ ಚಟುವಟಿಕೆಗಳಿಂದ ಬರುವ ಆದಾಯ ಮಾತ್ರ ಜಿಲ್ಲಾ ಪ್ರವಾಸೋದ್ಯಮ ಸಮಿತಿಗೆ ಹೋಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಅವರ ಜತೆ ಚರ್ಚೆ ನಡೆಸಿದ್ದು, ಕಡಲ ತೀರದ ಆದಾಯವನ್ನು ನಗರಸಭೆಗೆ ಪಡೆಯುವ ಸಂಬಂಧ ಕ್ರಮ ವಹಿಸಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿಯ ದೀಪಕ ಕುಡಾಳಕರ್ ಮಾತನಾಡಿ, ನಗರದಲ್ಲಿ ಸಾಕಷ್ಟು ಬಹು ಮಹಡಿ ಕಟ್ಟಡಗಳು ಆಗುತ್ತಿವೆ. ಆದರೆ, ಅದರಲ್ಲಿ ನಿಯಮ ಪಾಲನೆ ಆಗುತ್ತಿಲ್ಲ. ನಗರಸಭೆ ಅವುಗಳಿಂದ ವಸರಿ ಶುಲ್ಕ ಪಡೆಯುತ್ತಿದೆ. ಕೆಲವು ಕಟ್ಟಡಗಳಿಗೆ ಯುಜಿಡಿ ನೆಪ ಮಾತ್ರಕ್ಕೆ ನಿರ್ಮಿಸಿ, ಹೊಲಸನ್ನು ಚರಂಡಿಗೆ ಬಿಡಲಾಗುತ್ತಿದೆ ಇದಕ್ಕೆ ಕ್ರಮ ವಹಿಸಬೇಕು ಎಂದರು.
ಕೈರುನ್ನಿಸ್ಸಾ ಶೇಖ್ ಮಾತನಾಡಿ, ನಗರದ ಒಳಚರಂಡಿ ಆಗಾಗ ಉಕ್ಕುತ್ತಿದ್ದು, ಅದರ ರಿಪೇರಿಗೆ ಕ್ರಮ ವಹಿಸಬೇಕು. ಖಾಲಿ ಸೈಟ್‌ಗಳಲ್ಲಿರುವ ತ್ಯಾಜ್ಯಗಳ ನಿರ್ವಹಣೆಗೆ, ಪ್ಲಾಸ್ಟಿಕ್ ತಡೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ವಕೀಲ ಅನಿರುದ್ಧ ಹಳದೀಪುರ ಮಾತನಾಡಿ, ಕಾರವಾರದ ಟ್ಯಾಗೋರ್ ಕಡಲ ತೀರ ವಿಶ್ವದಲ್ಲಿ ಹೆಸರಾಗಿದೆ. ಆದರೆ, ಅದು ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ಅದಕ್ಕೆ ಕ್ರಮ ವಹಿಸಬೇಕು ಎಂದರು.
ಬಾಬು ಶೇಖ್ ಮಾತನಾಡಿ, ನಗರದ ವಿವಿಧೆಡೆ ಪಾರ್ಕಿಂಗ್ ಸಮಸ್ಯೆ ಇದ್ದು, ಅದನ್ನು ಜಾರಿಗೆ ತರಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಉಪಾಧ್ಯಕ್ಷೆ ಪ್ರೀತಿ ಮಧುಕರ ಜೋಶಿ, ಸ್ಥಾಯಿ ಸಮಿತಿ ಚೇರ್ಮನ್ ಮಾಲಾ ಹುಲಸ್ವಾರ್, ಪೌರಾಯುಕ್ತ ಜಗದೀಶ ಹುಲಗೆಜ್ಜಿನ CMC Meeting ನಲ್ಲಿ ಇದ್ದರು.