ಜಿಲ್ಲೆ

ಹೆದ್ದಾರಿಯಲ್ಲಿ ಅಪಾಯಕಾರಿ ಗುಂಡಿ ಮುಚ್ಚಲು ಸೂಚನೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಾಷ್ಟೀಯ ಹೆದ್ದಾರಿ 66ರಲ್ಲಿ ಅಪಾಯಕಾರಿ ಗುಂಡಿಗಳನ್ನು ತಕ್ಷಣ ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಸಂತೆಕಟ್ಟೆ ಅಂಡರ್​ ಪಾಸ್​, ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಶ್ರೀದಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಯಶ್​ ಪಾಲ್​ ಸುವರ್ಣ ಹೇಳಿದರು.

ನಗರಸಭೆ ಕಚೇರಿಯಲ್ಲಿ ಮೆಸ್ಕಾಂ, ಲೋಕೋಪಯೋಗಿ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ವಿವಿಧೆಡೆ ಈಗಾಗಲೇ ಸರ್ವೀಸ್​ ರಸ್ತೆಗಳು ಮಂಜೂರಾಗಿದ್ದು, ಕಾಮಗಾರಿ ತಕ್ಷಣ ಪ್ರಾರಂಭಿಸಬೇಕು. ರಾ.ಹೆ. 169ಎ ಕೆಳ ಪರ್ಕಳ ರಸ್ತೆ ಕಾಂಕ್ರೀಟಿಕರಣ, ಇಂದ್ರಾಳಿ ರೈಲ್ವೇ ಬ್ರಿಡ್ಜ್​, ಮಲ್ಪೆ ಆದಿ ಉಡುಪಿ ಕಾಮಗಾರಿ ಆದ್ಯತೆ ಮೇರೆಗೆ ನಡೆಸಲು ತಿಳಿಸಿದರು.

ಮಳೆ ಗಾಳಿ ಸಂದರ್ಭದಲ್ಲಿ ವಿದ್ಯುತ್​ ಶೀಘ್ರ ಮರು ಸಂಪರ್ಕಕ್ಕೆ ಹಾಗೂ ಹೊಸ ಟ್ರಾನ್ಸ್​ ಫಾರ್ಮರ್​ ಅಳವಡಿಕೆ ಮೆಸ್ಕಾಂ ಆದ್ಯತೆ ನೀಡಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ನಗರಸಭಾ ವ್ಯಾಪ್ತಿಯ ವಾರಾಹಿ ಯೋಜನೆಯ ಮೂಲಕ ಒಪ್ಪಂದದಂತೆ ಎಲ್ಲಾ ವಾರ್ಡ್​ಗಳಿಗೆ 24 ಗಂಟೆ ನಿರಂತರ ಕುಡಿಯುವ ನೀರು ಸರಬರಾಜಿಗೆ ಕ್ರಮ ವಹಿಸಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ಹೆರ್ಗ ಗ್ರಾಮದ ಬಬ್ಬುಸ್ವಾಮಿ ಲೇಔಟ್​ ನಲ್ಲಿ ನಿರ್ಮಿಸಿರುವ ನೂತನ ವಸತಿ ಸಮುಚ್ಛಯದ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ, ಚರಂಡಿ, ದಾರಿದೀಪ ಸಹಿತ ಮೂಲ ಸೌಕರ್ಯ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯೆ ರಜನಿ ಹೆಬ್ಬಾರ್​, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಪೌರಾಯುಕ್ತ ಮಹಾಂತೇಶ್​ ಹಂಗರಗಿ ಉಪಸ್ಥಿತರಿದ್ದರು.