ಜಿಲ್ಲೆ

ಇನ್ನು ನೀರು, ಓಳಚರಂಡಿ ಬಿಲ್‌ ಕಲೆಕ್ಷನ್‌ಗೂ ಆನ್‌ಲೈನ್‌ ವ್ಯವಸ್ಥೆ

Uttara Kannada - Subash Hegde

ಕಾರವಾರ: ಆನ್‌ಲೈನ್ ಮೂಲಕ ನೀರು ಹಾಗೂ ಒಳಚರಂಡಿ ಸಂಪರ್ಕದ ಶುಲ್ಕ ವಸೂಲಿ ವ್ಯವಸ್ಥೆ ಮಾಡಲು ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಅವರು ವಿಷಯ ಮಂಡಿಸಿದರು. ಈ ಮೊದಲು ಸ್ಥಳಕ್ಕೆ ಹೋಗಿ ನೀರಿನ ಬಿಲ್ ರೀಡಿಂಗ್ ಮಾಡಿಕೊಂಡು ನಂತರ ಕಚೇರಿಗೆ ಬಂದು ಬಿಲ್ ಕೊಡಬೇಕಿತ್ತು. ಈಗ ಹೊಸ ಸಾಫ್ಟ್ವೇರ್ ಮಾಡಿಕೊಳ್ಳಲಾಗಿದೆ. ಅದರ ಮೂಲಕ ಸ್ಥಳದಲ್ಲೇ ರೀಡಿಂಗ್ ಮಾಡಿ ಬಿಲ್ ಜನರೇಟ್ ಮಾಡಬಹುದಾಗಿದೆ. ಯಂತ್ರಕ್ಕೆ ಜಿಪಿಎಸ್ ಸಂಪರ್ಕ ಕೂಡ ಇದ್ದು, ಯಾವ ಸ್ಥಳದಲ್ಲಿ ಬಿಲ್ ತೆಗೆಯಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಲಿದೆ. ಕಾರ್ಡ್ ಸ್ವಾಪ್ ಮಾಡಿ ಅಥವಾ ಕ್ಯೂ ಆರ್ ಕೋಡ್ ಮೂಲಕವೂ ನೀರಿನ ಬಿಲ್ ಕಟ್ಟಬಹುದಾಗಿದೆ. ಸಾಫ್ಟ್ವೇರ್‌ಗೆ ತಗುಲಿದ ವೆಚ್ಚವನ್ನು ಐಸಿಐಸಿಐ ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ ಭರಿಸಲಾಗಿದೆ. ಈ ಮೊದಲು 100 ಬಿಲ್ ಆಗುತ್ತಿದ್ದರೆ ಈಗ 1 ಸಾವಿರ ಬಿಲ್‌ಗಳನ್ನು ಒಂದು ದಿನಕ್ಕೆ ಜನರೇಟ್ ಮಾಡಬಹುದು. ನಗರಸಭೆಗೆ ವರ್ಷಕ್ಕೆ 2 ಕೋಟಿ ರೂ. ನೀರಿನ ಬಿಲ್ ವಸೂಲಿ ಮಾಡಬೇಕು. ಹಳೆಯ ಬಾಕಿ 1.5 ಕೋಟಿ ರೂ.ಗಳಿವೆ ಎಂದು ವಿವರಿಸಿದರು. ಮುಂದಿನ ದಿನದಲ್ಲಿ ಒಳಚರಂಡಿ (ಯುಜಿಡಿ) ಸಂಪರ್ಕಕ್ಕೂ ಈ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಗರದಲ್ಲಿ ಪೂರೈಸುವ ನಲ್ಲಿ ನೀರಿಗೆ ಪರಿಷ್ಕೃತ ದರ ಆಕರಿಸಲು ಶಿಫಾರಸು ಮಾಡಿದೆ. ಆದರೆ, ಮಂಡಳಿಯ ಬಿಲ್ ಸ್ಲ್ಯಾಬ್ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು, ನಗರಸಭೆಗೆ ಇದರಿಂದ ನಷ್ಟವಾಗಲಿದೆ. ಹಾಗಾಗಿ ಪರಿಷ್ಕೃತ ದರಕ್ಕೆ ನಾವು ಒಪ್ಪಿಗೆ ನೀಡಿಲ್ಲ ಎಂದು ಪೌರಾಯುಕ್ತರು ಸಭೆಗೆ ಮಾಹಿತಿ ನೀಡಿ, ಒಪ್ಪಿಗೆ ಪಡೆದರು.

ನಗರದ ಪಾರ್ಕಿಂಗ್ ವ್ಯವಸ್ಥೆ ಜಾರಿಯಾಗದ ಬಗ್ಗೆ ಮಕ್ಬುಲ್ ಶೇಖ್ ಆಕ್ಷೇಪಿಸಿದರು. ಪಾರ್ಕಿಂಗ್ ಸಂಬಂಧ ಅಧಿಸೂಚನೆ ನಗರಸಭೆ ಹೊರಡಿಸಿದೆ. ಅದನ್ನು ಜಾರಿ ಮಾಡುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸದಸ್ಯ ರವಿರಾಜ ಅಂಕೋಲೆಕರ್ ಮಾಹಿತಿ ನೀಡಿದರು. ಸರಿಯಾಗಿರುವ ಹೈಮಾಸ್ಟ್ ದೀಪಗಳನ್ನೂ ತೆಗೆದು ಹಾಕುವ ಪ್ರಕ್ರಿಯೆ ನಗರಸಭೆಯಿಂದ ನಡೆದಿದೆ ಎಂದು ಶಿಲ್ಪಾ ನಾಯ್ಕ ಆಕ್ಷೇಪಿಸಿದರು. ಅದರ ಬಿಲ್ ಪಾವತಿ ಮಾಡದಂತೆ ಆಗ್ರಹಿಸಿದರು.

ಕಟ್ಟಡ ಕಾಣೆಯಾಗಿದೆ!!

ಟ್ಯಾಗೋರ್ ಕಡಲ ತೀರದಲ್ಲಿ ನಗರಸಭೆ 50 ಲಕ್ಷ ರೂ. ಖರ್ಚು ಮಾಡಿ ಕಟ್ಟಿದ ಮೀನು ಮಾರುಕಟ್ಟೆ ಕಟ್ಟಡವನ್ನು ಜಿಲ್ಲಾಡಳಿತ ತೆರವು ಮಾಡಿರುವುದಕ್ಕೆ ಸಂದೀಪ ತಳೇಕರ್, ಡಾ.ನಿತಿನ್ ಪಿಕಳೆ ಇತರರು ಆಕ್ಷೇಪಿಸಿದರು. ನಮ್ಮ ಕಟ್ಟಡವೊಂದು ಕಾಣೆಯಾಗಿದೆ, ಹುಡುಕಿಕೊಡಿ ಎಂದು ಆಗ್ರಹಿಸಿದರು. ಸಿಆರ್‌ಜಡ್ ಆಕ್ಷೇಪಣೆ ಇರುವ ಇತರ ಕಟ್ಟಡಗಳನ್ನು ತೆರವು ಮಾಡದೇ ಇರುವುದಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿದರು. ಎನ್‌ಜಿಟಿ ಸೂಚನೆಯಂತೆ ಮೀನು ಮಾರುಕಟ್ಟೆ ಕಟ್ಟಡ ತೆರವು ಮಾಡಲಾಗಿದೆ ಎಂದು ಜಗದೀಶ ಹುಲಿಗೆಜ್ಜಿ ವಿವರಿಸಿದರು.

ತೀರ ಸ್ವಚ್ಛತೆ ಬಂದ್

ಟ್ಯಾಗೋರ್ ಕಡಲ ತೀರದಲ್ಲಿ ಸ್ವಚ್ಛತೆಯ ಯಂತ್ರ ರಿಪೇರಿಯ 2.5 ಲಕ್ಷ ರೂ. ಪ್ರಸ್ತಾವನೆಯನ್ನು ಸಾಮಾನ್ಯ ಸಭೆ ತಿರಸ್ಕರಿಸಿತು. ಕಡಲ ತೀರದ ಸೌಲಭ್ಯಗಳಿಂದ ಬರುವ ಕರ ವಸೂಲಿಯನ್ನು ಪ್ರವಾಸೋದ್ಯಮ ಇಲಾಖೆ ಮಾಡಿ, ಆದಾಯ ಗಳಿಸುತ್ತಿದೆ. ಕಡಲ ತೀರ ಸ್ವಚ್ಛತೆಯನ್ನು ಮಾತ್ರ ನಗರಸಭೆ ಮಾಡಬೇಕಿದೆ. ತೀರ ಸ್ವಚ್ಛತೆಯ ಅನುದಾನ ಕೊಡುವುದಾಗಿ ಪ್ರವಾಸೋದ್ಯಮ ಇಲಾಖೆ ಈ ಹಿಂದೆ ತಿಳಿಸಿತ್ತು. ಆದರೆ, 22 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಆ ಅನುದಾನ ಬರುವವರೆಗೆ ಅಥವಾ ತೀದ ಆದಾಯವನ್ನೂ ಹಂಚಿಕೆ ಮಾಡುವ ಭರವಸೆ ಸಿಗುವವರೆಗೆ ನಾವು ಕಡಲ ತೀರ ಸ್ವಚ್ಛತೆ ಮಾಡುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.