ಕಾರವಾರ: ಟಿಡಿಆರ್ ಸೌಲಭ್ಯ ನೀಡಿ ನಗರದ ವಿವಿಧ ರಸ್ತೆಗಳನ್ನು ವಿಸ್ತರಿಸಲು ನಗರಸಭೆ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ನಗರದಲ್ಲಿ ಕಳೆದ ವಾರ ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು, ಮನೆಗಳಿಗೆ ನೀರು ನುಗ್ಗಿ ಆಗಿರುವ ಅನಾಹುತದ ಕುರಿತು ವಿಸ್ತ್ರತ ಚರ್ಚೆ ನಡೆಯಿತು. ಚರಂಡಿಗಳನ್ನು ಸಮರ್ಪಕವಾಗಿ ಹೂಳೆತ್ತದ ಕಾರಣ ಸಮಸ್ಯೆ ಆಗಿದೆ ಎಂದು ಸದಸ್ಯ ಸಂದೀಪ ತಳೇಕರ್ ಆಕ್ಷೇಪಿಸಿದರು. ಸೀಬರ್ಡ್ ನವಕಾನೆಲೆಯ ಕಾಮಗಾರಿಗಳಿಂದ ಬಿಣಗಾ ಹಾಗೂ ಬೈತಖೋಲ್‌ನಲ್ಲಿ ಸಮಸ್ಯೆ ಆಗಿರುವ ಬಗ್ಗೆ ರಾಜೇಶ ಮಾಜಾಳಿಕರ್ ಅಸಮಾಧಾನ ಹೊರಹಾಕಿದರು. ಪೌರಾಯುಕ್ತ ಜಗದೀಶ ಹುಗೆಜ್ಜಿ ಮಾತನಾಡಿ, ನಗರದಲ್ಲಿ ನೀರು ನಿಲ್ಲಲು ಚರಂಡಿ ಹೂಳೆತ್ತದೇ ಇರುವುದು ಕಾರಣವಲ್ಲ. ಈ ಬಗ್ಗೆ ಡ್ರೋನ್ ಸಮೀಕ್ಷೆ ಮಾಡಿಸಲಾಗಿದೆ. ಅದರಲ್ಲಿ ಹಲವು ಅಂಶಗಳು ಕಂಡುಬಂದಿವೆ ಎಂದರು.
ನಗರದ ಹಲವು ಕಡೆ ಚರಂಡಿಯೇ ಇಲ್ಲ. ಹಲವು ಮನೆಗಳನ್ನು ಚರಂಡಿ ಹಾಗೂ ರಸ್ತೆಯನ್ನೂ ಅತಿಕ್ರಮಿಸಿ ನಿರ್ಮಿಸಲಾಗಿದೆ. ಕಾನೂನಿನಂತೆ ಎನ್‌ಎ ಮಾಡಬೇಕು ಎಂದರೆ ರಸ್ತೆಗೆ ಜಾಗ ಬಿಡಬೇಕು. ಆದರೆ, ಕೆಲವೆಡೆ 3 ರಿಂದ 5 ಅಡಿ ಮಾತ್ರ ರಸ್ತೆಗಾಗಿ ಮಾಲೀಕರು ಜಾಗ ಬಿಟ್ಟುಕೊಟ್ಟಿದ್ದಾರೆ. ಇದರಿಂದ ಚರಂಡಿ ವ್ಯವಸ್ಥೆ ಅಲ್ಲೆಲ್ಲ ಸಮರ್ಪಕವಾಗಿಲ್ಲ. ಕಟ್ಟಡಗಳ ಸಂಖ್ಯೆ ಹೆಚ್ಚಿದಂತೆ ನಗರದಲ್ಲಿ ಇನ್ನಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದರು.
ಸಮಸ್ಯೆ ಬಗೆಹರಿಸಬೇಕು ಎಂದರೆ ನಗರ ಯೋಜನೆಯ ನಿಯಮದಂತೆ ಕನಿಷ್ಠ 30 ಅಡಿ ರಸ್ತೆ ಹಾಗೂ ಪಕ್ಕ ಚರಂಡಿ ಇರಬೇಕು. ನಗರ ಯೋಜನಾ ಪ್ರಾಽಕಾರದ ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ, ರಸ್ತೆಯನ್ನು ಅತಿಕ್ರಮಿಸಿ ನಿರ್ಮಿಸಿರುವ ಕಟ್ಟಡಗಳನ್ನು ತೆರವು ಮಾಡಲು ಸಮಿತಿ ಅನುಮತಿ ನೀಡಬೇಕು. ಹಾಗೊಮ್ಮೆ ಸ್ವಂತ ಜಾಗ ಇದ್ದರೂ ಅವರಿಗೆ ಟಿಡಿಆರ್ ನೀಡಿ, ರಸ್ತೆಗಾಗಿ ಜಾಗ ಪಡೆಯಲು ಪೌರಾಡಳಿತ ಕಾಯ್ದೆಯಲ್ಲಿ ಅವಕಾಶವಿದೆ ಎಂದರು.
ಹಳೆಯ ಟಿಟಿಆರ್ ನೀಡಿ:
2016 ರಲ್ಲಿ ಕಾರವಾರ-ಕೋಡಿಬಾಗ ರಸ್ತೆ ವಿಸ್ತರಣೆಯ ಸಂದರ್ಭದಲ್ಲಿ ಹಸ್ತಾಂತರಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಸೌಲಭ್ಯ ನೀಡುವುದಾಗಿ ನಗರಸಭೆ ಭರವಸೆ ನೀಡಿತ್ತು. ಆದರೆ, ಇದುವರೆಗೂ ಟಿಡಿಆರ್ ಕೊಟ್ಟಿಲ್ಲ ಈಗ ಮತ್ತೆ ಹೊಸದಾಗಿ ಟಿಡಿಆರ್ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಸದಸ್ಯ ಮಕ್ಬುಲ್ ಶೇಖ್ ಅಸಮಾಧಾನ ಹೊರ ಹಾಕಿದರು. ಪೌರಾಯುಕ್ತರು ಸ್ಪಷ್ಟನೆ ನೀಡಿ, ಕಾರವಾರ-ಕೋಡಿಬಾಗ ರಸ್ತೆಯಲ್ಲಿ ಭೂಮಿ ಬಿಟ್ಟುಕೊಟ್ಟ 202 ಭೂ ಮಾಲೀಕರ ಅಂತಿಮ ಪಟ್ಟಿ ಇತ್ತು.ಆದರೆ, ಇದುವರೆಗೆ ಅದರಲ್ಲಿ 7 ಜನ ಮಾತ್ರ ಟಿಡಿಆರ್ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು. ಅಧ್ಯಕ್ಷ ರವಿರಾಜ ಅಂಕೋಲೆಕರ್ ಮಾತನಾಡಿ, ಹಳೆಯ ಪ್ರಕರಣಗಳು ಸೇರಿಸಿ ಹೊಸದಾಗಿ ರಸ್ತೆ ವಿಸ್ತರಣೆ ಮಾಡುವ ಎಲ್ಲ ಯೋಜನೆಗಳಿಗೆ ಟಿಡಿಆರ್ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.
30 ಅನಧಿಕೃತ ಅಪಾರ್ಟ್ಮೆಂಟ್
ನಗರದಲ್ಲಿ ಈ ಹಿಂದೆ ನಿಯಮ ಮೀರಿದ 18 ಕಟ್ಟಡಗಳ ಪಟ್ಟಿ ಇತ್ತು. ಈಗ ಹೊಸ ಸರ್ವೇ ಮಾಡಿದ ನಂತರ 30 ಬಹುಮಹಡಿ ಕಟ್ಟಡಗಳನ್ನು ನಿಯಮ ಮೀರಿ ನಿರ್ಮಾಣ ಮಾಡಲಾಗಿದೆ. ಅವುಗಳ ಪಟ್ಟಿಯನ್ನು ಕೆಡಿಎಗೆ ಕಳಿಸಲಾಗಿದೆ. ಅವುಗಳ ಬಗ್ಗೆ ಕ್ರಮ ವಹಿಸುವ ಬಗ್ಗೆ ಶೀಘ್ರ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ತಿಳಿಸಿದರು.