ದೊಡ್ಡಬಳ್ಳಾಪುರದ ತಮ್ಮಶೆಟ್ಟಿಹಳ್ಳಿಯಲ್ಲಿ ಹಿಟಾಚಿ ಎನರ್ಜಿ ಇಂಡಿಯಾ ಸಂಸ್ಥೆಯ ಪವರ್ ಕ್ವಾಲಿಟಿ ಪ್ರಾಡಕ್ಟ್ಸ್ ಕೈಗಾರಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶಾಸಕ ಟಿ.ವೆಂಕಟರಮಣಯ್ಯ, ಹಿಟಾಚಿ ಕಂಪನಿ ಸಿಇಒ ಚಿಫಾನ್, ದಕ್ಷಿಣ ಏಷ್ಯಾ ಮತ್ತು ಭಾರತದ ಸಿಇಒ ವೇಣು ಮತ್ತಿತರರು ಇದ್ದರು. 
ಜಿಲ್ಲೆ

ದೊಡ್ಡಬಳ್ಳಾಪುರದಲ್ಲಿ ಪವರ್‌ಕ್ವಾಲಿಟಿ ಕಾರ್ಖಾನೆ ಉದ್ಘಾಟನೆ

Bengaluru Rural

ದೊಡ್ಡಬಳ್ಳಾಪುರ: ಗುಣಮಟ್ಟದ ವಿದ್ಯುತ್ (ಕ್ವಾಲಿಟಿ ಪವರ್) ಪೂರೈಕೆಯಾದರೆ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಲ್ಲಿ ಚುರುಕು ಪಡೆಯಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.


ನಗರ ಹೊರವಲಯದ ತಮ್ಮಶೆಟ್ಟಿಹಳ್ಳಿಯಲ್ಲಿ ಮಂಗಳವಾರ ಹಿಟಾಚಿ ಎನರ್ಜಿ ಇಂಡಿಯಾ ಕಂಪನಿಯ ಪವರ್ ಕ್ವಾಲಿಟಿ ಕಾರ್ಖಾನೆ ಉದ್ಘಾಟಿಸಿ ಮಾತನಾಡಿದರು.


ವಿದ್ಯುತ್ ಕ್ಷೇತ್ರದಲ್ಲಿ ಸಾಕಷ್ಟು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಇಂಗಾಲ ಶೂನ್ಯಗೊಳಿಸುವ ಹಸಿರು ವಿದ್ಯುತ್ ಉತ್ಪಾದನೆ ಸದ್ಯದ ಮಟ್ಟಿಗೆ ಸವಾಲಾಗಿದೆ. ಆದರೆ, ಈ ಸವಾಲುಗಳೇ ಮುಂದೊಂದು ದಿನ ಯಶಸ್ಸು ತಂದುಕೊಡಲಿವೆ ಎಂದರು. ದೇಶದ ಶೇ.50 ನವೀಕರಿಸಬಹುದಾದ ಇಂಧನವನ್ನು ರಾಜ್ಯವೇ ಉತ್ಪಾದಿಸುತ್ತಿದೆ. ಆದರೆ ಗುಣಮಟ್ಟದ ವಿದ್ಯುತ್ ಹಾಗೂ ಹಸಿರು ವಿದ್ಯುತ್ ಪೂರೈಕೆ ಸವಾಲಾಗಿದೆ ಎಂದರು.

ಒಂದೇ ತೆರನಾದ ವಿದ್ಯುತ್: ಭವಿಷ್ಯದ ವಿದ್ಯುತ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಿದೆ. ಪವರ್ ಗ್ರಿಡ್ ಪರ್ಫಾಮೆನ್ಸ್ ಅಗತ್ಯವಾಗಿದೆ. ಎಲ್ಲರಿಗೂ ಗುಣಮಟ್ಟ ಹಾಗೂ ಸಮಾನವಾದ ವಿದ್ಯುತ್ ಹಂಚಿಕೆ ದೃಷ್ಟಿಯಿಂದಲೇ ಪ್ರಧಾನಿ ಒನ್ ಗ್ರಿಡ್ ಒನ್ ನೇಷನ್ ಜಾರಿಗೆ ತಂದರು. ಅದರ ಪರಿಣಾಮ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ತೆರನಾದ ವಿದ್ಯುತ್ ಪೂರೈಕೆಯಾಗುತ್ತಿದೆ ಎಂದು ಸಿಎಂ ಹೇಳಿದರು.\

ಆರ್‌ಡಿ ಸ್ಥಾಪಿಸಲು ಮನವಿ: ವಿದ್ಯುತ್ ಕ್ಷೇತ್ರದಲ್ಲಿ ಆರ್‌ಎನ್‌ಡಿ ಕೇಂದ್ರ (ಸಂಶೋಧನೆ ಮತ್ತು ಅಭಿವೃದ್ಧಿ) ಸ್ಥಾಪಿಸಬೇಕು ಎಂದು ಬೊಮ್ಮಾಯಿ ಹಿಟಾಚಿ ಕಂಪೆನಿ ಅಧಿಕಾರಿಗಳಿಗೆ ಮನವಿ ಮಾಡಿದರು. ಹಿಟಾಚಿ ವಿದ್ಯುತ್ ಕ್ಷೇತ್ರದಲ್ಲಿ ಹೆಜ್ಜೆಗುರುತು ಮೂಡಿಸಿದೆ. ಹೀಗಿರುವಾಗ ವಿದ್ಯುತ್ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ಹಾಗೂ ಅಭಿವೃದ್ಧಿ ಅಗತ್ಯವಾಗಿದೆ. ಈಗಾಗಲೇ ವಿವಿಧ ಅಂತಾರಾಷ್ಟ್ರೀಯ ಕಂಪೆನಿಗಳು 400ಕ್ಕೂ ಹೆಚ್ಚು ಆರ್‌ಡಿ ಕೇಂದ್ರಗಳನ್ನು ಹೊಂದಿವೆ. ಹಿಟಾಚಿ ವತಿಯಿಂದ ಸಂಶೋಧನಾ ಕೇಂದ್ರ ಸ್ಥಾಪಿಸಿದರೆ ಸಂಸ್ಥೆಯ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದರು. ದಾವೋಸ್‌ನಲ್ಲಿ ಈಚೆಗೆ 65 ಸಾವಿರ ಕೋಟಿ ಬಂಡವಾಳ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ವಿದ್ಯುತ್ ಕ್ಷೇತ್ರದಲ್ಲಿ 1.25 ಲಕ್ಷ ಕೋಟಿ ಮೊತ್ತದ ಯೋಜನೆಗಳ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಎಂದರು.

ಉದ್ಯಮ ಸ್ನೇಹಿ ವಾತಾವರಣ: ಜಾಗತಿಕ ಬಂಡವಾಳ ಹೂಡಿಕೆಗೆ ಹೆಚ್ಚು ಬಂಡವಾಳ ಆಕರ್ಷಿಸಬೇಕು. ಆ ಮೂಲಕ ಗ್ಲೋಬಲ್ ಹಬ್‌ನಲ್ಲಿ ರಾಜ್ಯ ಪ್ರಥಮ ಸ್ಥಾನಕ್ಕೆ ತರಬೇಕು. ರಾಜ್ಯದ ಪರವಾಗಿ ಗ್ಲೋಬಲ್ ಇನ್ವೆಸ್ಟ್‌ಮೆಂಟ್‌ಗೆ ಹೆಚ್ಚಿನ ಬಂಡವಾಳ ತರಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.


ವರದಿ ಪರಿಶೀಲಿಸಿ ತೀರ್ಮಾನ: ಬೊಮ್ಮಾಯಿ ಅವರಿಗೆ ಜಿಲ್ಲಾ ಹೋರಾಟ ಸಮಿತಿ ಮುಖಂಡರು ದೊಡ್ಡಬಳ್ಳಾಪುರವನ್ನು ಜಿಲ್ಲಾಕೇಂದ್ರ ಮಾಡುವಂತೆ ಮನವಿ ಸಲ್ಲಿಸಿದರು. ಇದರ ಬಗ್ಗೆ ಬೆಳವಣಿಗೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಿ ತೀರ್ಮಾನ ಮಾಡಲಾಗುವುದು ಎಂದರು.