ಆಲಮಟ್ಟಿ: ಕೃಷ್ಣೆಯ ಜಲಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.2 ರಂದು ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಆಲಮಟ್ಟಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಹೆಲಿಪ್ಯಾಡ್, ಬಾಗಿನ ಅರ್ಪಿಸುವ ಆಲಮಟ್ಟಿ ಜಲಾಶಯದ ಸ್ಥಳ, ಸಭೆ ನಡೆಯುವ ಕೆಬಿಜೆಎನ್‌ಎಲ್ ಎಂಡಿ ಕಚೇರಿ, ಪ್ರವಾಸಿ ಮಂದಿರವನ್ನು ವೀಕ್ಷಿಸಿ ವಿವಿಧ ಮಾರ್ಗಸೂಚಿಗಳನ್ನು ನೀಡಿದರು. ಸೆ.2 ರಂದು ಬೆಳಗ್ಗೆ 11.45 ಕ್ಕೆ ಆಲಮಟ್ಟಿಗೆ ಆಗಮಿಸುವ ಮುಖ್ಯಮಂತ್ರಿಗಳು ನೇರವಾಗಿ ಜಲಾಶಯಕ್ಕೆ ತೆರಳಿ ಕೃಷ್ಣೆಗೆ ಬಾಗಿನ ಸಮರ್ಪಿಸಲಿದ್ದಾರೆ.
ಅಲ್ಲಿಂದ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ತೆರಳಿ ಅಲ್ಲಿ ಆಲಮಟ್ಟಿ ಜಲಾಶಯದ ಎತ್ತರದಿಂದ ಭೂಸ್ವಾಧೀನ, ಪುನರ್ವಸತಿ, ಪುನರ್ನಿರ್ಮಾಣ, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅನುಷ್ಠಾನ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜತೆ ವಿಶೇಷ ಸಭೆ ನಡೆಸಲಿದ್ದಾರೆ.
ಸಭೆ ನಂತರ ಎಂಡಿ ಕಚೇರಿಯ ಆವರಣದಲ್ಲಿಯೇ ಸಿಎಂ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಆವರಣದ ಹೊರಭಾಗದಲ್ಲಿ ಮುಖ್ಯಮಂತ್ರಿಗಳಿಗೆ ರೈತರು, ಜನಸಾಮಾನ್ಯರು ಮನವಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಕ್ಕೆ ಆಲಮಟ್ಟಿಯಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಮುಖ್ಯಮಂತ್ರಿಗಳು ತೆರಳಲಿದ್ದಾರೆ ಎಂದು ಡಿಸಿ ಟಿ.ಭೂಬಾಲನ್ ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಬಾಗಿನ ಸಮಾರಂಭ ಅದ್ದೂರಿಯಿಂದ ನಡೆಸಲಾಗುತ್ತಿದೆ. ಜಲಾಶಯ ದ್ವಾರ, ಅಣೆಕಟ್ಟೆ ವೃತ್ತ ಸೇರಿ ನಾನಾ ಕಡೆ ಹೂವಿನ ಅಲಂಕಾರ ಮಾಡಿ ಎಲ್ಲ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆದರೆ ಕುಂಭ ಮೆರವಣಿಗೆ ಇರುವುದಿಲ್ಲ ಎಂದು ಸೂಪರಿಂಟೆಂಡಿಂಗ್ ಇಂಜಿನಿಯರ್ ಡಿ.ಬಸವರಾಜ ತಿಳಿಸಿದರು.
ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಬೆಳಗಾವಿ ಐಜಿಪಿ ನೇತೃತ್ವದಲ್ಲಿ ಇಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನಾಲ್ವರು ಡಿವೈಎಸ್‌ಪಿ, 9 ಜನ ಸಿಪಿಐ, 25 ಪಿಎಸ್‌ಐ ಹಾಗೂ 328 ಪೊಲೀಸರು, ಎರಡು ಡಿಎಆರ್ ವಾಹನ, 40 ಜನ ಕೆಎಸ್‌ಐಎಸ್‌ಎಫ್ ಪೊಲೀಸರು ಭದ್ರತೆಯಲ್ಲಿರಲಿದ್ದಾರೆ ಎಂದರು. ತಹಸೀಲ್ದಾರ್ ಎ.ಡಿ. ಅಮರವಾಡಗಿ, ಅಸಿಸ್ಟಂಟ್ ಕಮಾಂಡೆಂಟ್ ಡಿ.ವಿ. ಅರುಣ, ರವಿ ಚಂದ್ರಗಿರಿಯವರ, ಡಿವೈಎಸ್‌ಪಿ ಕರುಣಾಕರ ಶೆಟ್ಟಿ, ಸಿಪಿಐ ಅಶೋಕ ಚವ್ಹಾಣ, ಅಹ್ಮದ್ ಸಂಗಾಪುರ, ಯಲಗೂರದಪ್ಪ ಪಟ್ಟಣಶೆಟ್ಟಿ ಇದ್ದರು.