ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮೊದಲು ಇದಕ್ಕೆ ಚಿಕಿತ್ಸೆ ಪಡೆಯಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಯೋತ್ಪಾದಕ ಎಂದ ಸಿಎಂಗೆ ಜೋಶಿ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳೋ ಹತಾಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಏನೇನೋ ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಮುಡಾ, ವಾಲ್ಮೀಕಿ ಹಗರಣದಿಂದಾಗಿ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಕಳೆದುಕೊಳ್ಳುವುದು ನಿಚ್ಚಳವಾಗಿದೆ. ಅಧಿಕಾರ ಹೋಗೋ ಕನಸು ಬೀಳುತ್ತಿದೆ ಅವರಿಗೆ. ಹೀಗಾಗಿ ತೀವ್ರ ಹತಾಶೆಗೆ ಒಳಗಾಗಿದ್ದಾರೆ ಎಂದರು.
ರಾಜಕಾರಣದಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ. ಈ ಹತಾಶೆಯಲ್ಲಿ ಸಿಎಂ ಹೀಗೆ ಅತ್ಯಂತ ಅಪ್ರಬುದ್ಧ ಮತ್ತು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ. ಮುಡಾ ಹಗರಣದಲ್ಲಿ ಸಿಎಂಗೆ ಹೈಕೋರ್ಟ್ ಸಿಕ್ಕಾಪಟ್ಟೆ ಜಾಡಿಸಿದೆ. ಅದರಿಂದ ಹೊರ ಬರಲು ಆಗುತ್ತಿಲ್ಲ ಅವರಿಗೆ. ಸಾಲದ್ದಕ್ಕೆ ರಾಜೀನಾಮೆ ಒತ್ತಡ ಬೇರೆ ಇದೆ. ಇದೆಲ್ಲದರ ಪರಿಣಾಮ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಮೊದಲು ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಜೋಶಿ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಅವರು ಮೊದಲೂ ನಮ್ಮನ್ನು ಟೀಕೆ ಮಾಡುತ್ತಿದ್ದರು. ನಾವು ಅವರನ್ನು ಟೀಕೆ ಮಾಡುತ್ತಿದ್ದೆವು. ಆದರೆ, ಯಾವತ್ತೂ ಹೀಗೆ ಅಪ್ರಬುದ್ಧ ಹೇಳಿಕೆ ಕೊಡುತ್ತಿರಲಿಲ್ಲ. ಈಗ ತೀರಾ ಹತಾಶರಾಗಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಬರುವುದು-ಹೋಗುವುದು ಸಹಜ. ಹತಾಶರಾಗಬಾರದು ಎಂದು ಸಚಿವ ಜೋಶಿ ಸಲಹೆ ನೀಡಿದರು.
ಆರ್‌ಎಸ್‌ಎಸ್ ಆಗಲಿ ಭಜರಂಗದಳ ಆಗಲಿ ಯಾವುದರ ಮೇಲೂ ಎನ್‌ಐಎ ಕೇಸ್ ಇಲ್ಲ. ಈ ಹಿಂದೆ ಅಧಿಕಾರಿಗಳು ತಪ್ಪು ಮಾಡಿದ್ದರೆ ಹಾಗಾದರೆ? ರಾಜಕಾರಣಿಗಳು ಕೇಸ್ ಮಾಡುತ್ತಾರೆಯೇ? ಈಗ ನೀವು ಕೇಸ್ ಮಾಡುತ್ತಿದ್ದೀರಾ ಹಾಗಾದರೆ? ಎಂದು ಸಿಎಂಗೆ ಜೋಶಿ ಪ್ರಶ್ನೆ ಮಾಡಿದರು.