ಮಳವಳ್ಳಿ: ಪಟ್ಟಣದ ಶಾಂತಿಕಾಲೇಜು ಮುಂಭಾಗ ಫೆ.18ರಂದು ಆಯೋಜಿಸಿರುವ ‘ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣೆ, ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಬೃಹತ್ ಸಮಾವೇಶ ಹಿನ್ನೆಲೆ ದೊಡ್ಡ ವೇದಿಕೆ ಸಿದ್ಧವಾಗಿದ್ದು, ಸುಮಾರು 50ರಿಂದ 60 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಬೆಳಗ್ಗೆ 11.30ಕ್ಕೆ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ತಾಲೂಕಿನ ಮಂಚನಹಳ್ಳಿಯಲ್ಲಿ ನಿರ್ಮಿಸಿರುವ ಭಕ್ತ ಶ್ರೀ ಕನಕದಾಸರ ಪುತ್ಥಳಿ ಹಾಗೂ ಎರಡು ಸಹಕಾರ ಸಂಘಗಳನ್ನು ಉದ್ಘಾಟಿಸಲಿರುವ ಸಿಎಂ, ಪಟ್ಟಣದಲ್ಲಿ ಸಾರ್ವಜನಿಕ ಕನಕದಾಸ ಕುರುಬ ಸಮಾಜದ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎನ್.ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಆರ್.ಹೆಬ್ಬಾಳ್ಕರ್, ಬಿ.ಎಸ್.ಸುರೇಶ್, ರಹೀಂ ಖಾನ್, ಈಶ್ವರ್ ಬಿ.ಖಂಡ್ರೆ, ಶಿವರಾಜ್ ಸಂಗಪ್ಪ ತಂಗಡಗಿ, ಎಸ್.ಎಸ್.ಮಲ್ಲಿಕಾರ್ಜುನ್, ಜಮೀರ್ ಅಹ್ಮದ್ ಖಾನ್, ಎನ್.ಎಸ್.ಬೋಸರಾಜು, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಸಮಾವೇಶದಲ್ಲಿ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗುವುದು. ಕೆಎಸ್‌ಆರ್‌ಟಿಸಿಯ 10 ಅಶ್ವಮೇಧ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಲಾಗುವುದು. ಹಲವು ಇಲಾಖೆಗಳ ಸೌಲಭ್ಯಗಳನ್ನು ಜನರಿಗೆ ಮಾಹಿತಿ ನೀಡಲು 50ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ.ಸಿದ್ಧತೆ ಪರಿಶೀಲನೆ: ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಶನಿವಾರ ಅಂತಿಮ ಸಿದ್ಧತಾ ಕಾರ್ಯ ಪರಿಶೀಲಿಸಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಜನರ ಬದುಕಿಗೆ ದಾರಿದೀಪವಾಗಿವೆ. ಸಮಾವೇಶದಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಲಿದ್ದು, ಊಟದ ವ್ಯವಸ್ಥೆಗಾಗಿ 100ಕ್ಕೂ ಹೆಚ್ಚು ಕೌಂಟರ್ ತೆರೆಯಲಾಗಿದೆ. ಕುಡಿಯುವ ನೀರು ಹಾಗೂ ಶೌಚಗೃಹದ ಸೌಲಭ್ಯ ಕಲ್ಪಿಸಲಾಗಿದೆ. ಪೂರಿಗಾಲಿ ಹನಿ ನೀರಾವರಿ ಯೋಜನೆಯ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ ಸಿಇಒ ಶೇಖ್ ತನ್ವೀರ್ ಅಸಿಫ್, ತಹಸೀಲ್ದಾರ್ ಕೆ.ಎನ್.ಲೋಕೇಶ್, ತಾ.ಪಂ.ಇಒ ಎಲ್.ಮಮತಾ ಇತರರಿದ್ದರು.