ವಿಜಯವಾಣಿ ಸುದ್ದಿಜಾಲ ಗದಗ
ನಗರದ ಸಂಭಾಪುರ ರಸ್ತೆಯಲ್ಲಿ 1.99 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಬಾಲಕಿಯರ ಬಾಲ ಮಂದಿರವನ್ನು ಭಾನುವಾರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಅವರು ಇಲ್ಲಿನ ಮಕ್ಕಳಿಗೆ ಕೆಲ ಪ್ರಶ್ನೆಗಳನ್ನು ಕೇಳಿ ನೈತಿಕ ಬಲ ತುಂಬಿದರು.
ಬಾಲ ಮಂದಿರ ಲೋಕಾರ್ಪಣೆಗೊಳಿಸಿದ ನಂತರ ಗೋಡೆಯ ಮೇಲೆ "ಗ್ರಾಮ ಸ್ವರಾಜ್' ಬಗ್ಗೆ ಬರೆದಿದ್ದನ್ನು ಗಮನಿಸಿದ ಸಿದ್ದರಾಮಯ್ಯ ಅವರು "ಗ್ರಾಮ ಸ್ವರಾಜ್' ಕುರಿತು ಹಾಗೂ ರಾಷ್ಟ್ರಪಿತ ಯಾರೆಂದು ಮಕ್ಕಳಿಗೆ ಪ್ರಶ್ನಿಸಿದರು. ಮಕ್ಕಳು "ಬಾಪೂಜಿ' ಎಂದು ಉತ್ತರಿಸಿದರು. ಬಾಪೂಜಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟವರು ಎಂದ ಸಿದ್ದರಾಮಯ್ಯ ಅವರು ಮಕ್ಕಳಿಗೆ ಚಾಕಲೇಟ್ ವಿತರಿಸಿದರು.
ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪರಶುರಾಮ ಶೆಟ್ಟಪ್ಪನ್ನವರ ಇತರರು ಇದ್ದರು.