ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜನರ ತೆರಿಗೆ ಹಣ ೧ ರೂನಲ್ಲಿ ೮೦ ಪೈಸೆ ಕಮೀಷನ್‌ಗೆ ಹೋಗಿ, ಅಭಿವೃದ್ಧಿ ಕೆಲಸಗಳಿಗೆ ಕೇವಲ ೨೦ ಪೈಸೆ ಮಾತ್ರ ಉಳಿಯುವಂತಹ ದುಸ್ಥಿತಿ ಇದೆ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂಭಾಗ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಾದಿಗ ಸಂಘಟನೆಗಳ ಒಕ್ಕೂಟದ ಸಂಯುಕ್ತ ಹೋರಾಟ ಸಮಿತಿಯು ಕೈಗೊಂಡಿದ್ದ ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಮುಸ್ಲಿಂ ಮೇಲಿನ ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಧರಣಿಯನ್ನುದ್ದೇಶಿಸಿ ಮಾತನಾಡಿದರು.
ಹಿಂದೆ ವಿವಿಧ ಇಲಾಖೆಯ ಅಧಿಕಾರಿಗಳ ವರ್ಗಾವಣೆಯ ದೊಡ್ಡ ದಂಧೆ ನಡೆಯುತ್ತಿತ್ತು. ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವುದಕ್ಕೆ ಹಣ ಕೊಡಬೇಕಾಗಿದೆ. ಇದರ ಬಲವನ್ನು ತೋರಿಸದಿದ್ದಲ್ಲಿ ಮುಖ ನೋಡದೇ ಹೊರಗೆ ಕಳುಹಿಸುತ್ತಾರೆ. ಎಲ್ಲದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾನೂನು ಸುವ್ಯವಸ್ಥೆಯು ಹದಗೆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜ ಕಲ್ಯಾಣ ಸಚಿವ ಎಚ್.ಡಿ.ಮಹದೇವಪ್ಪ ಪಟ್ಟು ಹಿಡಿದು ಮಗನನ್ನು ಲೋಕಸಭಾ ಸದಸ್ಯರನ್ನಾಗಿಸಿದರು. ಆದರೆ, ಎಷ್ಟು ಜನ ದಲಿತರನ್ನು ಅವರು ಉದ್ಧಾರ ಮಾಡಿದ್ದಾರೆ. ಮೊದಲು ಜನ ಸೇವಕರು ಜನರಿಗಾಗಿ ಇರುತ್ತಿದ್ದರು. ಆದರೆ, ಈಗ ಎಲ್ಲವೂ ನನಗಾಗಿ, ತಮ್ಮವರಿಗಾಗಿ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಪದಾಧಿಕಾರಿಗಳಾದ ಆರ್.ಮುನಿಯಪ್ಪ, ಮೂರ್ತಿ, ಶ್ರೀನಿವಾಸ್, ಮತ್ತಿತರರು ವಹಿಸಿದ್ದರು.
*ಸಿಎಂ ತಿರುಗಿ ಬೀಳಬೇಕಾಗಿತ್ತು
ಸಹಕಾರ ಸಚಿವರಾಗಿದ್ದ ಎಂ.ರಾಜಣ್ಣ ಸತ್ಯವನ್ನು ಹೇಳಿದಾಗ ಹೈಕಮಾಂಡ್ ಸಂಪುಟದಿಂದ ಕಿತ್ತು ಹಾಕಿಸಿದೆ. ರಾಜೀನಾಮೆ ಪಡೆಯಲು ಆದೇಶ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ತಿರುಗಿ ಬೀಳಬೇಕಾಗಿತ್ತು. ಏನೇ ಆದರೂ ಮಾಡುವುದಿಲ್ಲ. ದಲಿತ ನಾಯಕನಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದೇಳಬೇಕಾಗಿತ್ತು. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಜೋತು ಬೀಳುತ್ತಿದ್ದಾರೆ. ಇನ್ನು ಉಳಿದ ೨ ವರ್ಷದ ಅಧಿಕಾರಕ್ಕಾಗಿ ಒಪ್ಪಿಕೊಂಡು ಸುಮ್ಮನಾಗಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಅಹಿತಕರ ಬೆಳವಣಿಗೆಗಳನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ತುಳಿಯುವ ಕೆಲಸವಾಯಿತು. ಇದಕ್ಕೆ ಸೋಲದೇ ಪ್ರಮುಖ ಹುದ್ದೆಗಳನ್ನು ಬಿಟ್ಟು ಬಂದಿದ್ದು ನನ್ನನ್ನು ನಾಯಕರು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದಿದ್ದಾರೆ.