ಜಿಲ್ಲೆ

ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೇಬಿಬೆಟ್ಟದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಟ್ರಯಲ್ ಬ್ಲಾಸ್ಟ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕೆಆರ್‌ಎಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟೆಗೆ ಸುರಕ್ಷತೆಗೆ ಧಕ್ಕೆಯಾಗುವ ಯಾವುದೇ ಕೆಲಸವನ್ನೂ ಮಾಡದಂತೆ ತೀರ್ಮಾನಿಸಲಾಗಿದೆ. ಅದರಂತೆ ಟ್ರಯಲ್ ಬ್ಲಾಸ್ಟ್ ಕೂಡ ಮಾಡಲ್ಲ ಎಂದರು.

ಅಧಿವೇಶನದಲ್ಲಿ ಮೈಸೂರು ಮುಡಾ ಹಗರಣದ ಬಗ್ಗೆ ಚರ್ಚಿಸಲು ಅವಕಾಶ ನೀಡಲಿಲ್ಲ ಎನ್ನುವ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಅಶೋಕ್ ಅವರಿಗೆ ನಿಯಮಾವಳಿ ಪುಸ್ತಕ ಓದಿಕೊಳ್ಳುವಂತೆ ಹೇಳಬೇಕು. ನ್ಯಾಯಾಲಯದಲ್ಲಿರುವ ವಿಚಾರದ ಬಗ್ಗೆ ಮಾತನಾಡಬಾರದು. ಮಾತ್ರವಲ್ಲದೆ ಆ ವಿಷಯದ ಚರ್ಚೆಗೆ ಸ್ಪೀಕರ್ ಅವಕಾಶ ನೀಡಲಿಲ್ಲ. ಒಂದೊಮ್ಮೆ ಅವಕಾಶ ನೀಡಿದ್ದರೆ ಚರ್ಚೆ ಮಾಡಬಹುದಿತ್ತು. ನೇಪಾಳಿಗರು ಅಕ್ರಮವಾಗಿ ಚಿತ್ರದುರ್ಗದ ಡಾಬಾದಲ್ಲಿ ನೆಲೆಸಿದ್ದಾರೆನ್ನುವ ವಿಚಾರದ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.

ಬಾಗಿನ ಅರ್ಪಣೆಗೂ ಮುನ್ನ ಕೆಆರ್‌ಎಸ್ ಅಣೆಕಟ್ಟಿನ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರಸ್ತುತ ಮಳೆ ಕಡಿಮೆಯಾಗಿದೆ. ಆದಾಗ್ಯೂ ಕಾವೇರಿ ನದಿ ತೀರದ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ತಮಿಳುನಾಡಿದ ಸಿಎಂ ಅವರ ರಾಜ್ಯಗಳ ಕೆರೆಗಳನ್ನು ತುಂಬಿಸಲು ಸೂಚನೆ ನೀಡಿದ್ದಾರೆ. ನಾವು ನಮ್ಮ ರಾಜ್ಯದ ಕೆರೆಗಳನ್ನು ತುಂಬಿಸಲಾಗುತ್ತಿದೆ. ನಮ್ಮ ರೈತರನ್ನು ನಾವು ಕಾಪಾಡುತ್ತೇವೆ. ತಮಿಳುನಾಡು ಹಾಗೂ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿ. ಹೆಚ್ಚು ಕಾವೇರಿ ನೀರನ್ನು ಬಳಸಿಕೊಳ್ಳುವ ವಿಚಾರವಾಗಿ ಚರ್ಚೆ ನಡೆಸಬೇಕಾಗಿದೆ ಎಂದು ಹೇಳಿದರು.