ಮಂಡ್ಯ: ಮೀಸಲಾತಿಯಲ್ಲಿ ಶೇ.50ರಷ್ಟು ಗರಿಷ್ಟ ಪರಿಮಿತಿ ತೆಗೆಯಬೇಕು. ಅಂತೆಯೇ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ತರಬೇಕೆಂದು ಪ್ರಧಾನಮಂತ್ರಿ ಅವರನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಮೀಕ್ಷೆಯ ಸಮಯವನ್ನು ನಿಗದಿ ಮಾಡಬೇಕು. ಮಾತ್ರವಲ್ಲದೆ ನ್ಯಾಯಮೂರ್ತಿ ರೋಹಿಣಿ ಸಮಿತಿಯ ಶಿಫಾರಸನ್ನೂ ಜಾರಿಗೊಳಿಸುವ ಜತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೂ ಕೈಗೊಳ್ಳಬೇಕು ಎಂದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಈ ಬಗ್ಗೆ ಅವರಿಗೆ ಬದ್ಧತೆಯೂ ಇಲ್ಲ. ನೂರು ವರ್ಷದ ಇತಿಹಾಸ ನೋಡಿದರೆ ಅವರು ಯಾವಾಗಲೂ ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಲೇ ಬಂದವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಿಲ್ಲರ್ ಆಯೋಗದಿಂದ ಹಿಡಿದು ಇಂದಿನವರೆಗೆ ವಿರೋಧ ಮಾಡುತ್ತಲೇ ಬಂದಿದ್ದಾರೆ. 1925ರಲ್ಲಿ ಆರ್‌ಎಸ್‌ಎಸ್ ಪ್ರಾರಂಭವಾಗಿದ್ದು, 2025ಕ್ಕೆ ನೂರು ವರ್ಷವಾಗುತ್ತಿದೆ. ಅವರು ಮೀಸಲಾತಿಯನ್ನು ಎಂದೂ ಒಪ್ಪಿಲ್ಲ ಎಂದು ದೂರಿದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು. ರಾಹುಲ್ ಗಾಂಧಿ ಎರಡು ವರ್ಷದಿಂದ ಈ ಬಗ್ಗೆ ಬಹಳ ಗಂಭೀರವಾಗಿ ಒತ್ತಾಯ ಮಾಡುತ್ತಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಸೇರಿಸಲು ಅವರೇ ಕಾರಣಕರ್ತರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಎಲ್ಲರ ಹೋರಾಟ ಮತ್ತು ಒತ್ತಡದ ನಂತರ ಜಾತಿಗಣತಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಯಾವಾಗ ಎಂದು ಸಮಯ ನಿಗದಿ ಮಾಡಿಲ್ಲ. ಜನ ಗಣತಿಯಲ್ಲಿಯೇ ಜಾತಿ ಗಣತಿ ಮಾಡುವುದಾಗಿ ಹೇಳಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿಯ ಗರಿಷ್ಟ ಪರಿಮಿತಿಯನ್ನು ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದರು.
ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಶೇ.50ಗಿಂತ ಹೆಚ್ಚಬಾರದು ಎಂದು ಹೇಳಿದೆ. ಮೀಸಲಾತಿ ಶೇ.50ರಷ್ಟು ಆದರೆ ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿ ನೀಡಬೇಕು. ಹಿಂದುಳಿದವರಿಗೆ ಮೀಸಲಾತಿ ಅತ್ಯಂತ ಅನಿವಾರ್ಯ ಮತ್ತು ಅಗತ್ಯ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕಾಗಿದೆ. ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು. ಆಗ ಮಾತ್ರ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.
ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ಕೊಲೆಗೀಡಾದ ವ್ಯಕ್ತಿ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಎಡಿಜಿಪಿ(ಕಾನೂನು ಸುವ್ಯವಸ್ಥೆ) ಅವರೊಂದಿಗೆ ಮಾತನಾಡಿದ್ದೇನೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಮನುಷ್ಯನ ಪ್ರಾಣ ಬಹಳ ಮುಖ್ಯ. ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ ಎಂದರು.
ಪಹಲ್ಗಾಮ್‌ಗೆ ಏಕೆ ಭೇಟಿ ನೀಡಲಿಲ್ಲ?: ಮಂಗಳೂರಿನಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಸ್ಥಳಕ್ಕೆ ಬಿಜೆಪಿಯವರು ಭೇಟಿ ನೀಡಿದ್ದಾರೆ. ಅವರು ಯಾವಾಗಲೂ ರಾಜಕೀಯವಾಗಿ ಇಂತಹ ಪ್ರಕರಣಗಳನ್ನೇ ಹುಡುಕುತ್ತಾರೆ. ಒಂದು ವಾರದಿಂದ ಪಹಲ್ಗಾಮ್ ಪ್ರಕರಣದ ಬಗ್ಗೆ ಏನು ಹೇಳುತ್ತಾರೆ. ಉಗ್ರರ ದಾಳಿಗೆ 26 ಜನ ಸಾವನ್ನಪ್ಪಿದ್ದಾರೆ. ಪ್ರಧಾನಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆಯೇ?. ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರಿಗೆ ಇದು ಮುಖ್ಯ ಅನ್ನಿಸುತ್ತಿಲ್ಲವೇ ಎಂದು ಪ್ರಶ್ನಿಸಿದ ಸಿಎಂ, ಪಹಲ್ಗಾಮ್‌ಗೆ ಪ್ರಕರಣ ಭದ್ರತಾ ವೈಫಲ್ಯವಲ್ಲವೇ?. ಕಾಶ್ಮೀರದಲ್ಲಿ ಒಬ್ಬ ಪೊಲೀಸ್ ಆಗಲಿ, ಭದ್ರತಾ ಪಡೆಯವರಾಗಲಿ ನಿಯೋಜಿಸಿಲ್ಲ. ಯಾರೂ ಇಲ್ಲ ಎಂದರೆ ಏನು ಅರ್ಥ?. ನೂರಾರು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಪೊಲೀಸರು ಇರಬೇಕು ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ಯು.ಟಿ .ಖಾದರ್ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೂ ಬೆದರಿಕೆ ಕರೆಗಳು ಬರುತ್ತವೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿ ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.