ತುಮಕೂರು: ಸಿಎಂ ಸಿದ್ದರಾಮಯ್ಯ ಅವರು ಬೇರೆಬೇರೆ ರೀತಿಯ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು ಮೊದಲ ಅವದಿಯಲ್ಲಿ ಸಿಎಂ ಆಗಿದ್ದಾಗ ಇದ್ದ ಗತ್ತು ಈಗಿಲ್ಲ. ಆಗ ಪಾದರಸದಂತೆ ಕೆಲಸ ಮಾಡುತ್ತಿದ್ದರು, ಈಗ ಅದೇನಾಗಿದೆಯೋ ಬೇರೆಬೇರೆ ಒತ್ತಡದಲ್ಲಿದ್ದಾರೆ ಎಂದು ಸಿಎಂ ಆಪ್ತ, ಮಾಜಿ ಸಚಿವ ಕೆ.ಎನ್.ರಾಜಣ್ಣ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತುಮಕೂರಿನಲ್ಲಿ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ತಿಳಿದಿರುವಂತೆ ಸಿಎಂಗೆ ಬೇರೆಬೇರೆ ರೀತಿಯ ಒತ್ತಡಗಳಿದ್ದು ಕೆಲವನ್ನು ಹೇಳಲು ಬಹುದು, ಇನ್ನೂ ಕೆಲವನ್ನು ಹೇಳಲಾಗದು ಎಂದು ಬಾಂಬ್ ಸಿಡಿಸಿದರು. ನವೆಂಬರ್ನಲ್ಲಿ ಕ್ರಾಂತಿ ನಡೆಯಲಿದೆ ಎಂದು ಒಂದು ಗುಂಪು ಊಹೆ ಮಾಡುತ್ತಿದೆ ಆದರೆ, ನನಗೆ ತಿಳಿದಿರುವ ಪ್ರಕಾರ ಸರ್ಕಾರದಲ್ಲಿ ಯಾವುದೇ ಬದಲಾವಣೆಯಾಗದು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಉಳಿದಿರುವ ಅವಧಿಯಲ್ಲಿಯೂ ಮುಂದುವರಿಯಲಿದ್ದಾರೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಬಿಜೆಪಿ ಸುಳ್ಳು ಹೇಳಿಕೊಂಡು ರಾಷ್ಟ್ರ ಹಾಗೂ ರಾಜ್ಯದಲ್ಲಿ ಇಲ್ಲಿಯವರೆಗೂ ಬಂದಿದ್ದಾರೆ. ಅವರ ಮಾತಿಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ, ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ಗೆ ಕಾಂಗ್ರೆಸ್ ಪಕ್ಷದ ಶಿಸ್ತು ಪಾಲನಾ ಸಮಿತಿ ನೋಟಿಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಇವೆಲ್ಲಾ ಡಿಟೈಲ್ಸ್ ಗಳನ್ನು ಅಂದರೆ ನೋಟಿಸ್ ಪಡೆದಿರುವವರು ಹಾಗೂ ಕೊಟ್ಟಿರುವವರ ಬಗ್ಗೆ ಈಗ ಏನು ಹೇಳೋದಿಕ್ಕೆ ಹೋಗೋದಿಲ್ಲ. ಆದರೆ, ಮುಂದೊಂದು ದಿನ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಕುಣಿಗಲ್ ರಂಗನಾಥ್ ಇರಬಹುದು, ತಿಮ್ಮ ಪ್ಪ ಇರಬಹುದು ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಅದು ಸರಿ ಅಥವಾ ತಪ್ಪು ಅನ್ನೋದನ್ನ ಹೇಳೋದು ನಮ್ಮ ಕೆಲಸವಲ್ಲ ಎಂದರು.
ನಾವೆಲ್ಲರೂ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ, ನಾವು ಬದ್ಧರಲ್ಲ ಎಂದು ಯಾರೊಬ್ಬರೂ ಹೇಳಿಲ್ಲ, ಆದರೆ, ಈ ಬದ್ಧತೆಯನ್ನು
ಯಾರ್ಯಾರು ಯಾವ್ಯಾವ ಸಂದರ್ಭದಲ್ಲಿ ಎಷ್ಟೆಷ್ಟು ತೋರಿಸುತ್ತಾರೆ ಎಂಬುದನ್ನು ಕಾಲವೇ ತಿಮಾರ್ನಿಸಲಿದೆ. ಹೈಕಮಾಂಡ್ ಯಾವತ್ತೂ ನಮಗೆ ಸುಪ್ರೀಂ. ರಾಷ್ಟ್ರೀಯ ಪಕ್ಷಗಳಿಗೆ ಯಾವತ್ತು ಹೈಕಮಾಂಡ್ ಅಂದ್ರೆ ಸುಪ್ರೀಂ ಆಗಿರುತ್ತದೆ ಜೆಡಿಎಸ್ ನಂತಹ ಪಾರ್ಟಿಗಳಿಗೆ ಇಲ್ಲೇ ಪದ್ಮನಾಭನಗರದಲ್ಲಿ ಹೈಕಮಾಂಡ್ ಇರುತ್ತದೆ. ನಮಗೂ ಬೇರೆಯವರಿಗೆಲ್ಲ ಅಷ್ಟೇ ವ್ಯತ್ಯಾಸ. ನಮ್ಮ ನಿರ್ಧಾರಗಳು ದೆಹಲಿಯಿಂದ ಆಗುತ್ತೆ, ಸ್ಥಳಿಯವಾಗಿರುವಂತಹ ಪಾರ್ಟಿಗಳದ್ದು ಇಲ್ಲಿಂದಲೇ ಆಗುತ್ತೆ ಎಂದರು.
ಕುಣಿಗಲ್ ತಾಲೂಕನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆಲ್ಲದಿದ್ದರೆ ಸೌತ್ ಆಫ್ರಿಕಾಗೆ ಬೇಕಾದರೆ ಸೇರಿಸಿಕೊಳ್ಳಿ. ಯಾವನು ಬೇಡ ಅಂತಾರೆ.
ಕುಣಿಗಲ್ ತಾಲೂಕು ನಮ್ಮ ಜಿಲ್ಲೆಯಲ್ಲಿ ಇರಬೇಕು ಅನ್ನೋ ಅಪೇಕ್ಷೆ ಪಡುವಂತಹವನು ನಾನು. ಇವ್ರು ಬೆಂಗಳೂರು, ರಾಮನಗರಕ್ಕೆ ಕನಕಪುರಕ್ಕೆ ಸೇರಿಸಿಕೊಳ್ತಿನಿ ಅನ್ನುವ ಚಿಂತನೆ ಸರಿಯಲ್ಲ. ಕುಣಿಗಲ್ಗೆ ಹೇಮಾವತಿ ನೀರು ಕೊಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕುಣಿಗಲ್ ಹೊರತುಪಡಿಸಿ ಬೇರೆ ಜಾಗಕ್ಕೆ ನೀರು ತೆಗೆದುಕೊಂಡು ಹೋಗಲು ನಮ್ಮ ಜನ ಒಪ್ಪೋದಿಲ್ಲ.
ಕೆ.ಎನ್.ರಾಜಣ್ಣ
ಮಾಜಿ ಸಚಿವ