ಜಿಲ್ಲೆ

ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಗೆದ್ದ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್​ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ! Booker prize

Booker prize : ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದ್ದಾರೆ.

ಅನುವಾದಕಿ ದೀಪಾ ಬಸ್ತಿ ಜತೆಗೂಡಿ ಬಾನು ಮುಷ್ತಾಕ್​ ಅವರು ಪ್ರಶಸ್ತಿ ಸ್ವೀಕರಿಸಿರುವ ಫೋಟೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು ಎಂದಿದ್ದಾರೆ.

ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಷ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ 'ಹೃದಯ ದೀಪ'ವನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಬಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅಂದಹಾಗೆ ಬಾನು ಮುಷ್ತಾಕ್‌ ಅವರ ಸಣ್ಣ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಕೃತಿಯು 2025ರ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಅನುವಾದಿತ ಕಾದಂಬರಿ ವಿಭಾಗದ ಅಡಿಯಲ್ಲಿ ಈ ಗೌರವಕ್ಕೆ ಭಾಜನವಾಗಿದ್ದು, ಈ ಪ್ರಶಸ್ತಿಯನ್ನು ಪಡೆದ ಮೊದಲ ಸಣ್ಣ ಕಥೆಯಾಗಿದೆ. ಮುಷ್ತಾಕ್ ಅವರ ಹಾರ್ಟ್​ ಲ್ಯಾಂಪ್​ ಕೃತಿಯು ದಕ್ಷಿಣ ಭಾರತದ ಪಿತೃಪ್ರಧಾನ ಸಮುದಾಯಗಳಲ್ಲಿನ ಮಹಿಳೆಯರ ಜೀವನವನ್ನು ನಿರೂಪಿಸುವ 12 ಕಥೆಗಳನ್ನು ಹೊಂದಿದೆ. ಈ ಕೃತಿಯನ್ನು ಕನ್ನಡದಿಂದ ಇಂಗ್ಲಿಷ್​ಗೆ ಅನುವಾದ ಮಾಡಿದ ಕೀರ್ತಿ ಮಡಿಕೇರಿ ಮೂಲದ ಅನುವಾದಕಿ ದೀಪಾ ಬಸ್ತಿ ಅವರಿಗೆ ಸಲ್ಲುತ್ತದೆ. ದೀಪಾ ಭಸ್ತಿ ಅವರು ಬಹುಮಾನವನ್ನು ಪಡೆಯಲು ಲಂಡನ್​ನ ಟೇಟ್ ಮಾಡರ್ನ್‌ನಲ್ಲಿ ಮುಷ್ತಾಕ್ ಅವರೊಂದಿಗೆ ಹಾಜರಿದ್ದರು.

ಮೇ.21ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಕುರಿತ ಅಧಿಕೃತ ಘೋಷಣೆ ಹೊರಬಿದ್ದಿತು. ವಿಜೇತರಿಗೆ 50,000 ಪೌಂಡ್‌ ಬಹುಮಾನ ಸಿಗಲಿದೆ. ಇದನ್ನು ಲೇಖಕರು ಹಾಗೂ ಅನುವಾದಕರ ನಡುವೆ ಸಮನಾಗಿ ಹಂಚಲಾಗುತ್ತದೆ. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನನ್​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ವೃತ್ತಿಯಲ್ಲಿ ವಕೀಲೆ ಮತ್ತು ಪತ್ರಕರ್ತೆಯಾಗಿರುವ ಬಾನು ಮುಷ್ತಾಕ್, ಕಥೆಗಾರ್ತಿ, ಕವಿ, ಕಾದಂಬರಿಕಾರ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡ ಲೇಖಕಿ ಎಂಬ ಹೆಗ್ಗಳಿಕೆಗೆ ಬಾನು ಮುಷ್ತಾಕ್ ಪಾತ್ರರಾಗಿದ್ದಾರೆ.