ದೇವದುರ್ಗದ ತಿಂಥಣಿ ಬ್ರಿಡ್ಜ್‌ನಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಕನ್ನಡ ವಿವಿ ಹಾಲುಮತ ಅಧ್ಯಯನ ಪೀಠದ ಸಂಚಾಲಕ ಎಫ್.ಟಿ.ಹಳ್ಳಿಕೇರಿಗೆ ಸಾಹಿತ್ಯ ಕೃಷಿಗಾಗಿ ಹಾಲುಮತ ಭಾಸ್ಕರ ಪ್ರಶಸ್ತಿ, ಸಮಾಜ ಸೇವೆಗಾಗಿ ಪತ್ರಕರ್ತ ರವಿಕುಮಾರಗೆ ಕನಕರತ್ನ ಪ್ರಶಸ್ತಿ ಮತ್ತು ಶ್ರೀಕಾಳಿದಾಸ ಹೆಲ್ತ್ ಎಜ್ಯುಕೇಷನ್ ಟ್ರಸ್ಟ್ ಮುಖ್ಯಸ್ಥ ಪರಮೇಶ ದಂಪತಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಲಾಯಿತು. 
ಜಿಲ್ಲೆ

ಮಠಗಳಿಗೆ ಸಿಎಂ ಅನುದಾನ ನೀಡಲಿ

ನರೇಶ್ ಕುಮಾರ್

ದೇವದುರ್ಗ: ದೇಶದ ಸಂಸ್ಕೃತಿ, ಆಚಾರ, ವಿಚಾರ ಉಳಿಸುವ ಜತೆ ಜನರಿಗೆ ಅಧ್ಯಾತ್ಮ ಬೋಧನೆ ಮಾಡುವ ಮಠಮಾನ್ಯಗಳಿಗೆ ಮುಖಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕಗುರುಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ ನಿಮಿತ್ತ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಮಠಮಾನ್ಯಗಳ ಬಗ್ಗೆ ಭಕ್ತಿಯಿದೆ. ಸಿಎಂ ಸಿದ್ದರಾಮಯ್ಯಗೆ ಹಾಲುಮತದ ಬಗ್ಗೆ ಗೌರವವಿದೆ ಎಂದು ಮಾತಿನಲ್ಲಿ ಹೇಳಿದರೆ ಏನು ಪ್ರಯೋಜನ. ಹಾಲುಮತ ಪಟ್ಟದ ಪೂಜಾರಿಗಳು, ಸಣ್ಣಪುಟ್ಟ ಸಮಾಜದ ಮಠಗಳಿಗೆ ಅನುದಾನ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಸದಾನಂದಗೌಡ ಸಿಎಂ ಆಗಿದ್ದಾಗ 109 ಕೋಟಿ ರೂ., ಬಸವರಾಜ ಬೊಮ್ಮಾಯಿ ಅವಧಿಯಲ್ಲಿ 129 ಕೋಟಿ ರೂ. ಅನುದಾನ ನೀಡಿದೆ. ಆದರೆ, ಕಾಂಗ್ರೆಸ್ ಸರ್ಕಾರ ನಯಾಪೈಸೆ ನೀಡಿಲ್ಲ. ಮಠ ಮಂದಿರಗಳು, ಸಾಧು ಸಂತರು ದೇಶ, ಧರ್ಮ, ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಸಂಸ್ಕಾರ ನೀಡುವ ಜತೆಗೆ ಮಠಗಳು, ದೇವಸ್ಥಾನಗಳು ಬಡವರ ಮಕ್ಕಳಿಗೆ ಅನ್ನ, ಅಕ್ಷರ, ಅಧ್ಯಾತ್ಮ ಬೋಧನೆ ಮಾಡುತ್ತಿವೆ. ಸರ್ಕಾರ ಪ್ರತಿಮಠಕ್ಕೆ 25 ಲಕ್ಷ ರೂ. ಅನುದಾನ ನೀಡಬೇಕು ಎಂದರು.

ವಿಧಾನಸಭೆ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಯುವಜನತೆಯಲ್ಲಿ ಭಕ್ತಿಭಾವ, ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಇಂಥ ಕಾರ್ಯಕ್ರಮಗಳು ಯುವಕರನ್ನು ಧಾರ್ಮಿಕ ಸನ್ನಡತೆಕಡೆ ಕರೆದುಕೊಂಡು ಹೋಗುತ್ತವೆ. ಎಲ್ಲರೂ ಬೋಧನೆ ಮಾಡುತ್ತಾರೆ. ಆದರೆ, ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಆಗಲ್ಲ. ಅಂಥ ಮಹತ್ವದ ಕೆಲಸಗಳನ್ನು ಸ್ವಾಮೀಜಿಗಳು ಮಾಡಿಕೊಂಡು ಬರುತ್ತಿದ್ದಾರೆ. ಅಂತಹವರಿಗೆ ನಾವು ಸದಾ ಬೆನ್ನೆಲುಬಾಗಿ ಇರಬೇಕು ಎಂದರು.

ಪೀಠಾಧಿಪತಿ ಶ್ರೀ ಸಿದ್ಧರಾಮಾನಂದ ಸ್ವಾಮೀಜಿ, ಹಾವೇರಿಯ ಶ್ರೀ ಈಶ್ವರಾನಂದ ಸ್ವಾಮೀಜಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಕುರುಬರ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ, ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ರಾಷ್ಟ್ರಾಧ್ಯಕ್ಷ ಬಸವರಾಜ ಗುರಿಕಾರ, ಅಶೋಕ ದಳವಾಯಿ, ಇ.ಕಾಂತೇಶ ಈಶ್ವರಪ್ಪ, ಅಮಾತೆಪ್ಪ ಕಂದುಕೂರು, ಚಿದಾನಂದ ಗುರುವಿನ, ಪರಮೇಶ್ವರ, ವಿಜಯಲಕ್ಷ್ಮೀ ಇತರರಿದ್ದರು.

ಮೂವರಿಗೆ ಪುರಸ್ಕಾರ: ಕನ್ನಡ ವಿವಿಯ ಹಾಲುಮತ ಅಧ್ಯಯನ ಪೀಠದ ಸಂಚಾಲಕ ಎಫ್.ಟಿ.ಹಳ್ಳಿಕೇರಿಗೆ ಸಾಹಿತ್ಯ ಕೃಷಿಗಾಗಿ ಹಾಲುಮತ ಭಾಸ್ಕರ ಪ್ರಶಸ್ತಿ, ಸಮಾಜ ಸೇವೆಗಾಗಿ ಪತ್ರಕರ್ತ ರವಿಕುಮಾರಗೆ ಕನಕರತ್ನ ಹಾಗೂ ಶ್ರೀಕಾಳಿದಾಸ ಹೆಲ್ತ್ ಎಜುಕೇಷನ್ ಮತ್ತು ಅಹಲ್ಯಾ ಟ್ರಸ್ಟ್ ಮುಖ್ಯಸ್ಥ ಪರಮೇಶ ಅವರಿಗೆ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.