ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದರು. 
ಜಿಲ್ಲೆ

ವಕ್ಪ್ ಅದಾಲತ್ ಬಗ್ಗೆ ಸಿಎಂ ಸ್ಟಷ್ಟನೆ ನೀಡಲಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ವಕ್ಪ್ ಅದಾಲತ್ ನಡೆಸಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಆದರೂ, ವಕ್ಪ್ ಅದಾಲತ್ ನಡೆಸಿರುವ ಸಚಿವ ಜಮೀರ್ ಅಹ್ಮದ್​ಖಾನ್ ಅವರನ್ನು ಸಂಂಪುಟದಿಂದ ವಜಾಗೊಳಿಸಬೇಕು. ಯಾವ ಕಾನೂನಿನಡಿ ವಕ್ಪ್ ಅದಾಲತ್ ನಡೆಸಲಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಅವರು ಸ್ಪಷ್ಟನೆ ನಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಪರವೋ ಅಥವಾ ಶರಿಯಾ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.

ಕಾಂಗ್ರೆಸ್​ಗೆ ಭಸ್ಮಾಸುರನ ಕೈಯಲ್ಲಿ ಅಧಿಕಾರ ಸಿಕ್ಕಂತಾಗಿದೆ. ಭಸ್ಮಾಸುರನಂತೆ ಈ ಸರ್ಕಾರ ರೈತರ ಜಮೀನು, ಕೆರೆ, ಮೈದಾನ, ಶಾಲೆಗಳನ್ನು ನುಂಗುತ್ತಿದೆ ಎಂದು ವ್ಯಂಗ್ಯವಾಡಿದರು.

ವಕ್ಪ್ ಬೋರ್ಡ್ ರಾಜ್ಯದಲ್ಲಿ ಅಂದಾಜು 90 ಸಾವಿರ ಎಕರೆ ಜಮೀನು ಕಬಳಿಸಲು ಹುನ್ನಾರ ನಡೆಸಿದೆ. ಆ ಮೂಲಕ ಲ್ಯಾಂಡ್ ಜಿಹಾದ್​ಗೆ ಮುಂದಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಸಿ.ಟಿ. ರವಿ, ಧಾರವಾಡ ಜಿಲ್ಲೆ ಒಂದರಲ್ಲಿಯೇ 3 ಸಾವಿರ ಎಕರೆ ಜಮೀನಿಗೆ ವಕ್ಪ್ ಹೆಸರು ಕೂತಿದೆ. 1500 ವರ್ಷದ ಹಿಂದಿನ ಸೋಮೇಶ್ವರ ದೇವಸ್ಥಾನವೂ ವಕ್ಪ್ ಹೆಸರಿನಲ್ಲಿ ಇದೆ. 1500 ವರ್ಷಗಳ ಹಿಂದೆ ಇಸ್ಲಾಂ ಎಲ್ಲಿತ್ತು ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯವರ ಮನೆ ದೇವರು ಕಲಬುರ್ಗಿ ಜಿಲ್ಲೆಯ ಬೀರಲಿಂಗೇಶ್ವರ ದೇವಸ್ಥಾನವೂ ವಕ್ಪ್ ಆಸ್ತಿಯಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಪ್ ಎಂದು ನಮೂದಾಗಿದೆ. ಕಂಡಕಂಡವರ ಆಸ್ತಿ ಕಬಳಿಸಿ, ಬೇಲಿ ಹಾಕಲು ವಕ್ಪ್​ಗೆ ಅಧಿಕಾರವಿಲ್ಲ ಎಂದು ದೂರಿದರು.

ದಲಿತರ ಹಾಗೂ ಶೋಷಿತರಿಗೆ ವಕ್ಪ್ ಮರಣ ಶಾಸನ ರೀತಿಯಲ್ಲಿದೆ. ವಕ್ಪ್ ಆಸ್ತಿಯ ಬಗ್ಗೆ ಸಂಪೂರ್ಣ ಪರಿಶೀಲನೆ ಆಗಬೇಕು. ಕಾಂಗ್ರೆಸ್ ಎದೆಗಾರಿಕೆ ತೋರಿಸಿದ್ದರೆ ಭಾರತ ವಿಭಜನೆ ಆಗದೇ ಇರುವುದನ್ನು ತಡೆಯಬಹುದಿತ್ತು. ಇದೀಗ ವಕ್ಪ್ ಕರಾಳ ಕಾಯಿದೆ ವಿರುದ್ಧ ಎದೆಗಾರಿಕೆ ತೋರಿಸಲು ಬಿಜೆಪಿ ಸಿದ್ಧವಾಗಿದೆ ಎಂದರು.

ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆಯೇ ಹೊರತು ಸತ್ತಿಲ್ಲ. ಕಾಂಗ್ರೆಸ್ಸಿನವರು ರಾಕ್ಷಸರು, ಮೊದಲು ಗೆಲುವು ಸಾಧಿಸುತ್ತಾರೆ. ಪಾಪದ ಕೊಡ ತುಂಬುವವರೆಗೆ ಪಾಪಿ ಚಿರಾಯು ಆಗಿಯೇ ಇರುತ್ತಾನೆ. 2023 ರ ವಿಧಾನಸಭೆ ಚುನಾವಣೆಯ ಬಿಜೆಪಿಗೆ ಸೋಲಿಗೆ ಹಲವಾರು ಕಾರಣಗಳು ಇವೆ. ಆದರೆ, ನಾವು ಯಾರಿಗೂ ಅನ್ಯಾಯ ಮಾಡಲಿಲ್ಲ ಎಂದು ಸಿ.ಟಿ. ರವಿ ಹೇಳಿದರು.

ವಕ್ಪ್ ಬೋರ್ಡ್ ಯಾವುದೇ ಆಸ್ತಿಯನ್ನು ತನ್ನದೆಂದು ಘೋಷಣೆ ಮಾಡಿದರೆ, ಸಂತ್ರಸ್ತರಿಗೆ ಬೋರ್ಡ್ ದಾಖಲೆಗಳನ್ನು ತೋರಿಸಬೇಕಿಲ್ಲ. ಬದಲಾಗಿ, ಸಂತ್ರಸ್ತರು ತಮ್ಮಲ್ಲಿರುವ ದಾಖಲೆಗಳೊಂದಿಗೆ ವಕ್ಪ್ ನ್ಯಾಯಾಧೀಕರಣದಲ್ಲಿ ನ್ಯಾಯ ಕೇಳಬೇಕು. ಆದರೆ, ಕುರಿ,ತೋಳನ ಹತ್ತಿರ ನ್ಯಾಯ ಕೇಳಿದರೆ ನ್ಯಾಯ ಸಿಗುತ್ತದೆಯೇ ? ಎಂದು ಪ್ರಶ್ನಿಸಿದರು.