ಜಿಲ್ಲೆ

ಸಿಎಂ ವೈದ್ಯಕೀಯ ಸಮೂಹದ ಕ್ಷಮೆ ಕೇಳಲಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಹಠಾತ್ ಸಾವು ಸಂಭವಿಸುತ್ತಿರುವುದಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ರಚಿಸಿದ್ದ ತಜ್ಞರ ಸಮಿತಿಯೇ ವರದಿ ಸಲ್ಲಿಸಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ವೈದ್ಯಕೀಯ ಸಮೂಹದ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಇತ್ತೀಚೆಗೆ ಸಾವು ಸಂಭವಿಸುತ್ತಿರುವುದು ಆತಂಕದ ಸಂಗತಿಯಾಗಿದೆ. ಈ ಸಾವುಗಳಿಗೆ ಕೋವಿಡ್ ಲಸಿಕೆಯೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿ ಬೇಜವಾಬ್ದಾರಿತನ ಪ್ರದರ್ಶಿಸಿದ್ದರು ಎಂದು ಹೇಳಿದರು.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ ನೇತೃತ್ವದಲ್ಲಿಯೇ ರಾಜ್ಯ ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿಯೇ ವರದಿ ನೀಡಿದೆ. ಅದರ ಪ್ರಕಾರ ಹೃದಯಾಘಾತ ಹಾಗೂ ಹೃದಯ ಸ್ತಂಭನಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂಬ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿ ಕ್ಷಮೆ ಕೋರಬೇಕು ಎಂದರು.

ದೇಶದಲ್ಲಿ ಕೋವಿಡ್ ವ್ಯಾಪಕವಾಗಿದ್ದಾಗ ಇದರ ನಿಯಂತ್ರಣಕ್ಕೆ ಲಸಿಕೆಯೇ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಅದರಂತೆ ದೇಶೀಯವಾಗಿ ಲಸಿಕೆ ತಯಾರಿಸಲಾಗಿತ್ತು. ಒಂದು ವೇಳೆ ವಿದೇಶಿ ಲಸಿಕೆಯಾಗಿದ್ದರೆ, ಹೃದಯಾಘಾತಕ್ಕೆ ಕಾರಣವಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೇನೊ ? ಸ್ವತ: ಸಿದ್ದರಾಮಯ್ಯ ಅವರೇ ಲಸಿಕೆ ತೆಗೆದುಕೊಂಡಿದ್ದಾರೆ. 77ನೇ ವಯಸ್ಸಿನಲ್ಲೂ ಆರೋಗ್ಯವಾಗಿದ್ದಾರೆ. ಹಾಗಾದರೆ, ಅವರು ವಿದೇಶಿ ಲಸಿಕೆ ತೆಗೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.

ನಾನೇ ಸಿಎಂ ಹೇಳಿಕೆ ಸರಿಯಲ್ಲ

ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರವಿರುವ ದೇಶದ ಯಾವುದೇ ರಾಜ್ಯದ ಮುಖ್ಯಮಂತ್ರಿಗಳು 5 ವರ್ಷ ನಾನೇ ಸಿಎಂ ಎಂದು ಹೇಳಿಕೆ ನೀಡುತ್ತಿಲ್ಲ. ಆದರೆ, ಸಿದ್ದರಾಮಯ್ಯ ಅವರು 5 ವರ್ಷ ನಾನೇ ಸಿಎಂ ಆಗಿ ಇರುತ್ತೇನೆ ಎಂದು ಪದೇ ಪದೆ ಹೇಳುತ್ತಿದ್ದಾರೆ. ಪಕ್ಷದೊಳಗೆ ಸಮಸ್ಯೆ ಇರುವುದರಿಂದಲೇ ಅವರು ಹಾಗೇ ಹೇಳುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಾವೇ ಮುಂದಿನ ಸಿಎಂ ಎಂದು ಆಂತರಿಕವಾಗಿ ಹೇಳುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

ಎಐಸಿಸಿ ಹಿಂದುಳಿದ ವರ್ಗಗಳ ಕಮಿಟಿಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ. ಎರಡೂವರೆ ವರ್ಷಗಳಲ್ಲಿ ಅವರು ಸಿಎಂ ಸ್ಥಾನ ಕಳೆದು ಕೊಳ್ಳುವುದಪ ಖಚಿತ ಎಂಬುದರ ಸಂಕೇತವಿದು ಎಂದು ಟೀಕಿಸಿದರು.