ಮೈಸೂರು: ಇಡೀ ದೇಶವೇ ಭಯೋತ್ಪಾದನೆ ಕೃತ್ಯದಿಂದ ಆಕ್ರೋಶಗೊಂಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಂತಿ ನೊಬೆಲ್ ಪ್ರಶಸ್ತಿ ಪಡೆಯುವುದಕ್ಕಾಗಿ ಪಾಕಿಸ್ತಾನದೊಂದಿಗೆ ಯುದ್ಧ ಬೇಡ ಎನ್ನುತ್ತಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎಂ.ಮೋಹನ್ ವ್ಯಂಗ್ಯವಾಡಿದರು.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 27 ಪ್ರವಾಸಿಗರನ್ನು ಅಮಾನುಷವಾಗಿ ಕೊಂದಿರುವುದಕ್ಕೆ ಇಡೀ ದೇಶವೇ ಆಕ್ರೋಶಗೊಂಡಿದೆ. ಜನರು ಆಕ್ರೋಶದಿಂದ ಕುದಿಯುತ್ತಿದ್ದು, ಪಾಕಿಸ್ತಾನದೊಂದಿಗೆ ಯುದ್ಧ ಮಾಡಿ, ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಮಾತ್ರ ಯಾವ ಕಾರಣಕ್ಕಾಗಿ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವುದು ಬೇಡ ಎಂದು ಹೇಳುತ್ತಿದ್ದಾರೆ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರವಾಸಿಗರನ್ನು ಕೊಂದಿರುವುದಕ್ಕೆ ಈಗಾಗಲೇ ಕೇಂದ್ರ ಸರ್ಕಾರ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಈಗಾಗಲೇ ನಾಲ್ಕು ಬಾರಿ ಯುದ್ಧ ಮಾಡಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ್ದರೂ, ಅದು ತನ್ನ ದುಷ್ಟ ಬುದ್ಧಿ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗಾಗಿ, ಮತ್ತೊಮ್ಮೆ ಸರಿಯಾದ ಪಾಠ ಕಲಿಸಬೇಕಾಗಿದೆ. ಆದರೆ, ಭಯೋತ್ಪಾದಕರ ದಾಳಿಗೆ, ಗುಪ್ತದಳ, ಭದ್ರತಾ ವೈಫಲ್ಯವೇ ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ತವರು ಜಿಲ್ಲಾ ಕೇಂದ್ರವಾದ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಪುಂಡರು ದಾಳಿ ನಡೆಸಿದ್ದಾರೆ. ಪೊಲೀಸ್ ಠಾಣೆಗಳಿಗೆ ನುಗ್ಗಿ ಗಲಭೆ ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ಭದ್ರತಾ ವೈಪಲ್ಯ, ಗುಪ್ತದಳದ ವೈಫಲ್ಯವಲ್ಲವೇ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಮುಂದಾಗಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಿಜೆಪಿ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ. ಐದು ಬಾರಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಅವರು, ಈಗ ಪಹಲ್ಗಾಮ್‌ನಲ್ಲಿ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿರುವುದನ್ನು ತಮಗೆ ಬೇಕಾದಂತೆ ಮಾತನಾಡುತ್ತಿದ್ದಾರೆ.
ಪೊಲೀಸರ ಮೇಲೆ ದಾಳಿ ನಡೆಸಿದವರು, ಕೆಜೆ ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಪೊಲೀಸ್ ಠಾಣೆಗೆ, ಶಾಸಕರ ಮನೆಗೆ ಬೆಂಕಿ ಹಚ್ಚಿದವರನ್ನು ಕಾಂಗ್ರೆಸ್‌ನವರು ಅಮಾಯಕರು ಎನ್ನುತ್ತಾರೆ. ಇವರಿಗೆ ನಿಜಕ್ಕೂ ದೇಶ ಪ್ರೇಮ ಇಲ್ಲವೇ ಎಂದು ಕಿಡಿಕಾರಿದರು.
ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ದೇಶದ್ರೋಹಿಗಳೆಂದು ಘೋಷಿಸಬೇಕು. ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಇತರರು ಇದ್ದರು.