ಉಡುಪಿ: ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು, ಶೇ. 40 ಕಮಿಷನ್ ದಂಧೆಯಿಂದ ರಾಜ್ಯ ತಲೆತಗ್ಗಿಸುವಂತಾಗಿದೆ. ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ 40 ಲಕ್ಷ ರೂ. ರೆಡ್‌ಹ್ಯಾಂಡ್ ಸಿಕ್ಕಿದೆ. ಪುತ್ರನ ಜೊತೆಗೆ ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪ ಅವರನ್ನೂ ಬಂಧಿಸಬೇಕು. ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮೈಸೂರು ಸ್ಯಾಂಡಲ್ ಸೋಪ್‌ನ ಸುವಾಸನೆಯನ್ನು ಭ್ರಷ್ಟಗೊಳಿಸಿದ್ದಾರೆ. ಈ ಎಲ್ಲಾ ಭ್ರಷ್ಟಾಚಾರದ ಹಣ ಎಲ್ಲಿಗೆ ಹೋಗಿದೆ? ಯಾರಿಗೆಲ್ಲಾ ಪಾಲು ಸಿಕ್ಕಿದೆ ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕು. ಬೊಮ್ಮಾಯಿ ಮೂಗಿನ ಕೆಳಗೆ ನಡೆದ ಭ್ರಷ್ಟಾಚಾರ ಬಯಲಾಗಿದೆ. ಒಳಚರಂಡಿ ಮತ್ತು ನೀರು ಸರಬರಾಜು ಬೋರ್ಡ್‌ನಲ್ಲಿ ಈವರೆಗೆ ಸಾವಿರ ಕೋಟಿ ರೂ. ಲೂಟಿ ಮಾಡಿರುವ ಬಗ್ಗೆ ಒಂದು ವಾರದಲ್ಲಿ ರಾಜ್ಯದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತನಿಖೆ ನಡೆಸಿ, ಭ್ರಷ್ಟಾಚಾರ ಮತ್ತು ಲೂಟಿಯ ಸಂಪೂರ್ಣ ದಾಖಲೆಯನ್ನು ತೆರೆದಿಡಬೇಕು. ಲೋಕಾಯುಕ್ತ ದಾಳಿ ಬಗ್ಗೆ ಪ್ರಧಾನಿ, ಅಮಿತ್ ಶಾ, ನಡ್ಡಾ ಮೌನವಾಗಿದ್ದಾರೆ. ಇಡಿ, ಸಿ ಬಿ ಐ ಯಾವಾಗ ಕರ್ನಾಟಕಕ್ಕೆ ಬರುತ್ತದೆ ಎಂಬುದನ್ನು ತಿಳಿಯಬಯಸುತ್ತೇವೆ ಎಂದರು.
ಸಚಿವ ಅಶ್ವತ್ಥ ನಾರಾಯಣ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಎಂದು ಹೇಳಿದ್ದಾರೆ. ಸ್ಥಳ ನಿಗದಿ ಮಾಡಿ ಸಮಯ ಕೊಟ್ಟರೆ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಅವರನ್ನು ಕರೆದುಕೊಂಡು ನಾವೇ ಬರುತ್ತೇವೆ. ಕಾಂಗ್ರೆಸ್ ನಾಯಕರು ಬಲಿಯಾದರೂ ನಮ್ಮ ಭರವಸೆಗಳನ್ನು ಈಡೇರಿಸದೆ ಇರುವುದಿಲ್ಲ. ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಬಲಿದಾನ ಮಾಡಿದ್ದಾರೆ. ಅವರು ಗತಿಸಿದ ಮಾತ್ರಕ್ಕೆ ಕಾಂಗ್ರೆಸ್ ನಿರ್ನಾಮವಾಗಿಲ್ಲ. ನಮಗೆ ಬಲಿದಾನದ ಪರಂಪರೆ ಇದೆ ಎಂದು ಹೇಳಿದರು.
ಬಲಿದಾನ ಕಾಂಗ್ರೆಸ್ ಪರಂಪರೆ