ಬೆಳ್ತಂಗಡಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ತಾನು ಶುದ್ಧ, ಪರಿಶುದ್ಧ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಮುಡಾ ಹಗರಣದ ಚರ್ಚೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ವಿಫಲ, ಭ್ರಷ್ಟಾಚಾರದ ಆಡಳಿತ ನೀಡುತ್ತಿರುವ ಇವರು ಕೂಡಲೇ ಉತ್ತರ ಕೊಡಬೇಕು ಇಲ್ಲವಾದಲ್ಲಿ ಕುರ್ಚಿ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಳೆಗಾಲದ ಅಧಿವೇಶನ ಕೇವಲ ಕಾಟಾಚಾರಕ್ಕೆ ನಡೆಸಲಾಗಿದೆ. ಸಂವಿಧಾನದ ಪುಸ್ತಕ ಹಿಡಿದುಕೊಂಡರೆ ಸಾಲದು ಅದರ ಪಾಲನೆಯಾಗಬೇಕು. ಮುಖ್ಯಮಂತ್ರಿಯವರೇ ನೇರ ಭಾಗಿಯಾಗಿರುವ ಹಗಣರ ಮೂಡಾದ್ದು. ಅವೈಜ್ಞಾನಿಕ ಗ್ಯಾರಂಟಿ ಅನುಷ್ಠಾನಗೊಳಿಸಲು ಪ.ಪಂ, ಪ.ಜಾತಿ ಯವರಿಗೆ ಮೀಸಲಿಟ್ಟ ಹಣವನ್ನು ಬಳಸಲಾಗಿದೆ. ಯಾವುದೇ ಚರ್ಚೆಯಿಲ್ಲದೆ ಏಳು ಮಸೂದೆಗಳನ್ನು ತಮಗೆ ತೋಚಿದಂತೆ ಮಂಜೂರು ಮಾಡಿರುವುದು ವ್ಯವಸ್ಥೆಗೆ ಮಾಡಿದ ಅಪಚಾರ ಎಂದರು.
ವಿಧಾನಸಭಾಧ್ಯಕ್ಷರು ನಿಯಮದಡಿ ಚರ್ಚೆಗೆ ಅವಕಾಶ ಇಲ್ಲ ಎಂದು ಹೇಳುತ್ತಿದ್ದಾರೆ. ಅಹೋರಾತ್ರಿ ಧರಣಿಗೆ ಆಡಳಿತ ಪಕ್ಷವೇ ಕಾರಣ ಎಂದು ಆರೋಪಿಸಿದ ನಾಯಕ್ ಜು.3 ರಿಂದ ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಹಾಗು ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಮಾಡುವ ಮೂಲಕ ಜನರನ್ನು ಎಚ್ಚರಿಸಲಿದ್ದೇವೆ ಎಂದರು.
ಮಂಡಲಾಧ್ಯಕ್ಷ ಶ್ರೀನಿವಾಸ ಗೌಡ, ಜಯಾನಂದ ಗೌಡ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ ಗೌಡ ಉಪಸ್ಥಿತರಿದ್ದರು.