ವಿಜಯವಾಣಿ ಸುದ್ದಿಜಾಲ ಗದಗ,
ಪ್ಲೊರೈಡ್ ದೋಷಯುಕ್ತ ಕುಡಿಯುವ ನೀರನ್ನು ಕೊನೆಗಾಣಿಸಿ, ರೋಣ, ನರೇಗಲ್, ಗಜೇಂದ್ರಗಡ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಸದುದ್ದೇಶದಿಂದ ಉದ್ಘಾಟನೆ ಮಾಡುತ್ತಿರುವ ಯೋಜನೆಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಜನರಿಗೆ ನೀರಿನ ಸೌಲಭ್ಯ ಒದಗಿಸುವುದಕ್ಕೂ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ. ಪಾಟೀಲ, ಶಾಸಕ ಕಳಕಪ್ಪ ಬಂಡಿ ಗುಡುಗಿದರು.
ಜಿಲ್ಲೆಯ ರೋಣ ಪಟ್ಟಣದಲ್ಲಿ ಸೋಮವಾರ ಜರುಗಿದ 119 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು 22 ಕೋಟಿ ವೆಚ್ಚದ ಕಾಮಗಾರಿಗೆ ಶಂಕು ಸ್ಥಾಪನೆ ಕಾರ್ಯಕ್ರಮ, ಫಲಾನುಭವಿಗಳ ಸಮಾವೇಶದಲ್ಲಿ ಭಾನುವಾರ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿದರು. ನೀರು ರಸ್ತೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುವುದನ್ನು ನೋಡಿದ್ದೇವೆ. ಆದರೆ, ನೀರು, ರಸ್ತೆಗೆ ವಿರೋಧಿಸಿ ಪ್ರತಿಭಟನೆ ನಡೆದದ್ದು ಇದೇ ಮೊದಲ ಬಾರಿ. ಅಂತಹ ಕುಖ್ಯಾತಿ ಕಾಂಗ್ರೆಸ್ ಗಳಿಸಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದರು
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿಶೇಷವಾಗಿ ನಗರಗುಂದ ತಾಲೂಕಿನ ಹದಲಿ ಗ್ರಾಮ ಮತ್ತು ರೋಣ ಪಟ್ಟಣವನ್ನು ಸ್ಮರಿಸಿದರು. ಕಳಸಾ ಬಂಡೂರಿ ಹೋರಾಟಕ್ಕೆ ನರಗುಂದ ತಾಲೂಕಿನ ಹದಲಿ ಗ್ರಾಮ ಪ್ರೇರಣೆ ನೀಡಿದರೆ, ರೈತ ಮಹಿಳೆಗೆ ಪ್ರತಿ ತಿಂಗಳು 1 ಸಾವಿರ ರೂ. ನೀಡುವ ಯೋಜನೆಗೆ ರೋಣ ಮತ ಕ್ಷೇತ್ರ ಪ್ರೇರಣೆ ನೀಡಿದೆ ಎನ್ನುವ ಮೂಲಕ ಈ ಹಿಂದೆ ಈ ಭಾಗದಲ್ಲಿ ನಡೆದ ಹೋರಾಟಗಳನ್ನು ನೆನೆಪಿಸಿಕೊಂಡರು.
ನಾನು ಜಲಸಂಪನ್ಮೂಲ ಸಚಿವನಾದ ಸಂದರ್ಭದಲ್ಲಿ 2009 ಕ್ಷೇತ್ರದ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಆರಂಭವಾಗಿತ್ತು. ಈಗ ನಮ್ಮಿಂದಲೇ ಉದ್ಘಾಟನೆಗೊಳ್ಳುತ್ತಿದೆ. ಯಾರೂ ನಿಮಗೆ ನೀರನ್ನು ಕೊಡುವುದಕ್ಕೆ ಅಡ್ಡಗಾಲ ಹಾಕುತ್ತಾರೆ ಅವರಿಗೆ ಮುಂದಿನ ಚುನಾವಣೆಯಲ್ಲಿ ನೀರನ್ನು ಕುಡಿಸಿ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಸಿಎಂ ಬೊಮ್ಮಾಯಿ ಅವರು ಜಲ ಸಚಿವರಾಗಿದ್ದ ಸಂದರ್ಭ ರೋಣ, ನರೇಗಲ್, ಗಜೇಂದ್ರಗಡವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಯೋಜನೆ ಆರಂಭಿಸಿದ್ದರು. ಈಗ ಅವರೇ ಉದ್ಘಾಟನೆ ಮಾಡುತ್ತಿದ್ದಾರೆ. ಇದು ಸಂತಸದ ವಿಷಯ. ನನ್ನ ಕ್ಷೇತ್ರದಲ್ಲಿ 500 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆದಿವೆ. ಬಸವರಾಜ ಬೊಮ್ಮಾಯಿ ಅವರು ಕಳಸಾ ಬಂಡೂರಿ ಯೋಜನೆ ಕುರಿತು ಮೂವತ್ತು ವರ್ಷಗಳ ಹಿಂದೆ ಪಾದಯಾತ್ರೆ ಮಾಡಿದ್ದರು ಎಂದರು.
ಕೋಟ್: ರಸ್ತೆ, ಕುಡಿಯುವ ನೀರು ಪೂರೈಸಿ ಎಂದು ದೇಶದಲ್ಲಿ ಪ್ರತಿಭಟನೆ ನಡೆಯುತ್ತವೆ. ಆದರೆ ನಮಗೆ ನೀರು ಬೇಡ, ರಸ್ತೆಯು ಬೇಡ ಎಂದು ರೋಣದಲ್ಲಿ ಪ್ರತಿಭಟನೆ ನಡೆಯುತ್ತವೆ. ಇಲ್ಲಿನ ಕಾಂಗ್ರೆಸ್ ಮನಸ್ಥಿತಿ ಅಂತದ್ದಾಗಿದೆ - ಕಳಕಪ್ಪ ಬಂಡಿ, ಶಾಸಕ
ಕೋಟ್: ಸ್ವ ಹಿತಾಸಕ್ತಿಗೆ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಇಲ್ಲಿ ಯಾರಿಗೂ ಹೆದರುವ, ಬೆದರುವ ಅಗತ್ಯವಿಲ್ಲ. ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ, ಅದಕ್ಕೆ ಪೂರಕವಾಗಿ ಕೆಲಸ ಮಾಡಿದ್ದರೆ ನಾವೇಕೆ ಹೆದರಬೇಕು. - ಬೈರತಿ ಬಸವರಾಜ, ಸಚಿವ
ಕಾಂಗ್ರೆಸ್ ತರಾಟೆ ತೆಗೆದುಕೊಂಡ ಸಿಸಿ ಪಾಟೀಲ:
ಎಲ್ಲಿ ನೋಡಿದ್ರು ಕಾಂಗ್ರೆಸ್ ಗ್ಯಾರಂಟಿ ಕಾರ್ಡಗಳು ಎಂಬ ಸುಳ್ಳು ಭರವಸೆ ನೀಡುತ್ತಿದೆ. ಅದೇ ರೀತಿ ಸ್ಥಳೀಯ ಕಾಂಗ್ರೆಸ್ ನಾಯಕರ ಮನಸ್ಥಿತಿ ಇದೆ. ಇಲ್ಲಿನ ಮಾಜಿ ಕಾಂಗ್ರೆಸ್ ಶಾಸಕರು ತಾವು ಅಧಿಕಾರದಲ್ಲಿ ಇದ್ದಾಗ ಜಿಗಳೂರು ಕೆರೆಯಲ್ಲಿ ಒಂದು ಹಿಡಿ ಹೂಳನ್ನು ತೆಗೆಯಲಿಲ್ಲ. ಆದರೆ, ಕೆರೆ ಉದ್ಘಾಟನೆ ಸಂದರ್ಭದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿಸುತ್ತಾರೆ. ಅಂತವರ ಕೈಯಲ್ಲಿ ಅಧಿಕಾರ ಕೊಡಬಹುದಾ ಎಂದು ನಿವೇ ಯೋಚಿಸಿ ಎಂದರು