ಹಾವೇರಿ/ ಶಿಗ್ಗಾಂವಿ (ಗ್ರಾ): ತಾಲೂಕಿನ ತಡಸ ಗ್ರಾಮದ ಬಳಿ ಕೈಗಾರಿಕಾ ವಲಯ ಸ್ಥಾಪಿಸಲು ಕೆಐಡಿಬಿಗೆ ಆಗ್ರಹಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜಲಜೀವನ ಮಿಷನ್ ಯೋಜನೆಯಡಿ ಶಿಗ್ಗಾಂವಿ, ಸವಣೂರ, ಹಾವೇರಿ ಹಾಗೂ ಹಾನಗಲ್ಲ ತಾಲೂಕಿನ 291 ಗ್ರಾಮಗಳ 860 ಕೋಟಿ ರೂ. ಮೊತ್ತದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಇತರ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶೀಘ್ರದಲ್ಲೇ ಈ ಯೋಜನೆ ಜಾರಿಯಾಗಲಿದ್ದು, ಸಾವಿರಾರು ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ಭರವಸೆ ನೀಡಿದರು.
ನಾಲ್ಕು ತಾಲೂಕಿನ ೨೯೧ ಗ್ರಾಮಗಳ ಪ್ರತಿಯೊಂದು ಮನೆಗೆ ನೀರು ನೀಡುವುದು ಬಹು ವರ್ಷಗಳ ಕನಸಾಗಿತ್ತು. ಬಹುಗ್ರಾಮಗಳ ಯೋಜನೆಯಲ್ಲಿ ತಡಸ ಗ್ರಾಮ ಸೇರಿಸಲು ಅಂದಿನ ಸರ್ಕಾರ ತಿರಸ್ಕರಿಸಿತ್ತು. ೨ನೇ ಡಿಪಿಆರ್ ಗೂ ಅನುಮೋದನೆ ಸಿಗಲಿಲ್ಲ. ಮೋದಿ ಅವರು ಮುಂದಿನ ಐದು ವರ್ಷಗಳಲ್ಲಿ ಎಲ್ಲರಿಗೂ ಕುಡಿಯುವ ನೀರು ಕೊಡುತ್ತೇವೆ ಎಂದು ಕೆಲಸ ಪ್ರಾರಂಭಸಿದ್ದಾರೆ.
ಮುಂದಿನ ೮-೧೦ ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುತ್ತದೆ. ಶಿಗ್ಗಾಂವಿ ತಾಲೂಕಿನ 93, ಸವಣೂರಿನ 49, ಹಾವೇರಿ ತಾಲೂಕಿನ 37 ಹಾಗೂ ಹಾನಗಲ್ಲ ತಾಲೂಕಿನ 112 ಗ್ರಾಮಗಳು ಸೇರಿ 291 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ ಎಂದರು.
ಸವಣೂರ ಏತ ನೀರಾವರಿ ಹಿರೇಬೆಂಡಿಗೇರಿ ವರೆಗೆ ಬಂದಿದೆ. ಸಮಗ್ರ ತಡಸ ಆಸ್ಪತ್ರೆಯನ್ನು ಪಿಎಚ್ ಸಿ ಗೆ ಮೇಲ್ದರ್ಜೆಗೆ ಏರಿಸಲು ಮಂಜೂರು ಮಾಡಿದ್ದೇನೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಕಾಲೇಜು ಮಂಜೂರು ಮಾಡುತ್ತೇನೆ. ಆಟದ ಮೈದಾನ ಸೇರಿ ಎಲ್ಲ ಬೇಡಿಕೆ ಈಡೇರಿಸುತ್ತೇನೆ.
ಸಮಾರಂಭದಲ್ಲಿ ವಾಕರಸಾ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಗ್ರಾಪಂ ಅಧ್ಯಕ್ಷೆ ರಾಮವ್ವ ಲಮಾಣಿ, ಉಪಾಧ್ಯಕ್ಷ ಮಂಜುನಾಥ ನಂಜಪ್ಪನವರ, ಮತ್ತಿತರರು ಪಾಲ್ಗೊಂಡಿದ್ದರು.