ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವರು-ಧರ್ಮದ ಹೆಸರಲ್ಲಿ ಜನರನ್ನು ಕಾಂಗ್ರೆಸ್ ಯಾವತ್ತೂ ಭಾವನಾತ್ಮಕವಾಗಿ ಕೆರಳಿಸಿ ಅಧಿಕಾರ ನಡೆಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ವೃಷಭಾವತಿ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮದುದ್ದಕ್ಕೂ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾ, ರಾಜ್ಯ ಬಿಜೆಪಿ ನಾಯಕರ ಕಾಲೆಳೆಯುತ್ತಾ, ಕಾಂಗ್ರೆಸ್ ಸರ್ಕಾರದ ಬೆನ್ನುತಟ್ಟಿಕೊಳ್ಳುತ್ತಾ ಮಾತನಾಡಿದ ಸಿಎಂ, ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುವ ಬಿಜೆಪಿಯವರು ಬಡವರ ಪರ ಯಾವುದಾದರೊಂದು ಶಾಶ್ವತ ಯೋಜನೆ ಜಾರಿ ಮಾಡಿದ್ದರೆ ಎದೆತಟ್ಟಿಕೊಂಡು ಹೇಳಲಿ, ಒಂದೇ ವೇದಿಕೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಆಹ್ವಾನಿಸುತ್ತೇನೆ. ಕಾಂಗ್ರೆಸ್ ಸಾಧನೆ ಏನು? ಅವರ ಪಕ್ಷಗಳ ಸಾಧನೆ ಏನು? ಎಂಬುದನ್ನು ಬಹಿರಂಗವಾಗಿ ಚರ್ಚಿಸೋಣ ಎಂದು ಪಂಥಾಹ್ವಾನ ನೀಡಿದರು.
ಬಿಜೆಪಿಯವರು ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು, ಸುಳ್ಳು ಹೇಳಿ ಅಧಿಕಾರ ಹಿಡಿಯುವ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿಲ್ಲ. ಬಿಜೆಪಿಯವರು ಯಾವಾಗಲೂ ಜನಾಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಹೆಸರಿನಲ್ಲಿ ಹಿಂಬಾಗಿಲ ಮೂಲಕವೇ ಅಧಿಕಾರಕ್ಕೆ ಬಂದಿರೋದು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಟೀಕಿಸಿದರು.
ಗ್ಯಾರಂಟಿ ಬೇಡ ಎಂದು ಬರೆದುಕೊಡಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರು ಮೊದಲು ಅವರ ಕಾರ್ಯಕರ್ತರಿಗೆ ಹೇಳಲಿ, ಯಾರಿಗೆ ಗ್ಯಾರಂಟಿ ಯೋಜನೆ ಬೇಡವೋ ಅವರು ನಮಗೆ ಬೇಡ ಎಂದು ಬರೆದುಕೊಡಲಿ ಎಂದು ಉಪ ಮುಖ್ಯಂಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾರೆ, ಆದರೆ ಅವರ ಬಹುತೇಕ ಎಲ್ಲ ಕಾರ್ಯಕರ್ತರು ಗ್ಯಾರಂಟಿ ಲಾನುಭವಿಗಳಾಗಿದ್ದಾರೆ. ಯೋಜನೆಗಳ ಜಾರಿಯಲ್ಲಿ ಪಕ್ಷಭೇದ ಮಾಡಿಲ್ಲ, ಬಡವರಿಗಾಗಿ ಎಲ್ಲ ವರ್ಗದ ಜನರಿಗಾಗಿ ಯೋಜನೆ ಅನುಷ್ಠಾನಗೊಳಿಸಿದ್ದೇವೆ ಎಂದರು.
ಹೆಚ್ಚು ಆದಾಯ ಬರುವ ದೇವಸ್ಥಾನಗಳ ಸ್ವಲ್ಪಭಾಗದ ಹಣವನ್ನು ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣಪುಟ್ಟ ದೇಗುಲಗಳ ಅಭಿವೃದ್ಧಿಗೆ ಬಳಸುವ ಬಗ್ಗೆ ನಾವು ಮಾತನಾಡಿದರೆ ಬಿಜೆಪಿಯವರು ಅದಕ್ಕೂ ವಿರೋಧಿಸುತ್ತಾರೆ, ನೋಡಿದರೆ ದೇವರು, ದೇವಸ್ಥಾನ ಎಂದು ಹೇಳುತ್ತಾ ರಾಜಕೀಯ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಯಾರ‌್ರೀ ಈ ಭಾಗದ ಸಂಸದರು? ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಯಾವಾಗಲೂ ಬಾಯಿಮುಚ್ಚಿಕೊಂಡು ಕುಳಿತಿರುತ್ತಾರೆ, ರಾಜ್ಯದ ಪರವಾಗಿ ಅವರು ಎಲ್ಲಿಯೂ ಬಾಯಿಬಿಡುವುದಿಲ್ಲ ಎಂದ ಸಿದ್ದರಾಮಯ್ಯ, ಯಾರ‌್ರೀ ಈ ಭಾಗದ ಸಂಸದರು ಎಂದು ಹೇಳಿದ ಕೂಡಲೇ ವೇದಿಕೆಯಲ್ಲಿ ಕುಳಿತಿದ್ದ ಶಾಸಕ ಶರತ್‌ಬಚ್ಚೇಗೌಡ ಒಂದು ಕ್ಷಣ ಮುಜುಗರಕ್ಕೊಳಗಾದರು. ಆಗ ಕುರ್ಚಿಯಿಂದ ಎದ್ದ ಸ್ಥಳೀಯ ಶಾಸಕ ಶ್ರೀನಿವಾಸ್, ಸಿಎಂ ಕಿವಿಯಲ್ಲಿ ಉಸುರಿದರು. ಹಾಂ ಎಂದು ಉದ್ಘಾರ ತೆಗೆದ ಸಿದ್ದರಾಮಯ್ಯ ಮಾತಿನ ವರಸೆ ಬದಲಿಸಿದರು. ಇದು ವೇದಿಕೆಯಲ್ಲಿದ್ದವರ ನಗೆಗೆ ಕಾರಣವಾಯಿತು.
ಎಸ್‌ಟಿಎಸ್ ಆಗಮನ ಶಿಳ್ಳೆ ಚಪ್ಪಾಳೆ ಕಾರ್ಯಕ್ರಮದ ಮಧ್ಯೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ವೇದಿಕೆಗೆ ಆಗಮಿಸುತ್ತಿದ್ದಂತೆ ತುಂಬಿದ ಸಭೆಯಲ್ಲಿ ಶಿಳ್ಳೆ ಚಪ್ಪಾಳೆ ಕೇಳಿಬಂತು. ನಗುತ್ತಲೇ ಬಂದು ಸಚಿವ ಜಮೀರ್ ಪಕ್ಕದಲ್ಲಿ ಎಸ್‌ಟಿಎಸ್ ಆಸೀನರಾದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 66 ಸೀಟನ್ನಷ್ಟೇ ಬಿಜೆಪಿ ಗೆದ್ದಿದೆ, ಅದರಲ್ಲಿ ಎಸ್.ಟಿ.ಸೋಮಶೇಖರ್ ಹಾಗೂ ಹೆಬ್ಬಾರ್ ನಮ್ಮ ಕಡೆ ಬಂದಾಗಿದೆ, ಇನ್ನು ಉಳಿದಿರುವುದು ಕೇವಲ 64 ಗಿರಾಕಿಗಳಷ್ಟೇ ಎಂದು ಭಾಷಣದ ನಡುವೆ ಎಸ್‌ಟಿಎಸ್ ಮುಖ ನೋಡಿಕೊಂಡು ಸಿಎಂ ಸಿದ್ದರಾಮಯ್ಯ ಹುಸಿ ನಗೆ ಬೀರಿದರು.
ಅಯ್ಯೋ ರಾಮ, ನೀರು ಕೊಡ್ರಪ್ಪ ಸಾವಿರಾರು ಮಂದಿ ಜಮಾಯಿಸಿದ್ದ ಕಾರ್ಯಕ್ರಮದಲ್ಲಿ ಕುಡಿವ ನೀರಿಗಾಗಿ ಜನ ಪರದಾಡಿದರು.
ಬೆಳಗ್ಗೆ 10 ಗಂಟೆಯಿಂದಲೇ ಜನಸಾಗರ ಹರಿದುಬಂದಿತ್ತು. ಆದರೆ ಎಲ್ಲರಿಗೂ ಕುಡಿವ ನೀರು ಪೂರೈಸಲು ಸಾಧ್ಯವಾಗದೆ ಕಾರ್ಯಕರ್ತರು ಪರದಾಡಿದರು. ಬಿಸಿಲ ಜಳಕ್ಕೆ ಬಸವಳಿದ ಜನ ‘ನೀರು ಕೊಡ್ರಪ್ಪ, ನೀರು ಎಲ್ಲಿದೆ ಹೇಳ್ರಪ್ಪ’ ಎಂದು ಪರದಾಡುತ್ತಿದ್ದ ದೃಶ್ಯ ಕಂಡುಬಂತು. ಅಷ್ಟೂ ಜನಕ್ಕೆ ಬೆರಳೆಣಿಕೆೆ ಇ-ಟಾಯ್ಲೆಟ್ ಅಳವಡಿಸಿದ್ದರಿಂದ ಮಹಿಳೆಯರು ತೀವ್ರ ಮುಜುಗರ ಅನುಭವಿಸುವಂತಾಯಿತು. ಪೆಂಡಾಲ್‌ನಲ್ಲಿ ಜಾಗ ಸಿಗದೆ, ಹೊರಗೆ ಬಿಸಿಲು ತಡೆಯಲಾರದೆ ನೆರಳಿಗಾಗಿ ಸಾವಿರಾರು ಜನ ಹುಡುಕಾಟ ನಡೆಸುತ್ತಿದ್ದರು. ಕಾರ್ಯಕ್ರಮ ಮುಗಿಯುವ ಮೊದಲೆ ಅರ್ಧದಷ್ಟು ಜನ ಸ್ಥಳದಿಂದ ಕಾಲ್ಕಿತ್ತಿದ್ದರು.
ಬೀಡಿ-ಬೆಂಕಿಪೊಟ್ಟಣ ಸೀಝ್ ಕಾಟಾಚಾರಕ್ಕೆ ಭದ್ರತಾ ತಪಾಸಣೆ ನಡೆಸುತ್ತಿದ್ದ ಪೊಲೀಸರು ಜನರು ತಂದಿದ್ದ ಬೀಡಿ-ಬೆಂಕಿಪೊಟ್ಟಣಗಳನ್ನು ಕಟ್ಟುನಿಟ್ಟಾಗಿ ಜಪ್ತಿ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಕಂಠಪೂರ್ತಿ ಮದ್ಯಸೇವಿಸಿ ಆಗಮಿಸಿದ್ದ ಕೆಲವರು ಮದ್ಯದ ಪ್ಯಾಕೇಟ್‌ಗಳನ್ನು ಕಿಸೆಯಲ್ಲಿಟ್ಟುಕೊಂಡು ಬಂದಿದ್ದರು. ಇದನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಂತೆ ಕೆರಳಿದ ಕೆಲವರು ಮದ್ಯ ಕಸಿದುಕೊಂಡು ವಾಪಸ್ ತೆರಳುತ್ತಿದ್ದ ದೃಶ್ಯ ಕಂಡುಬಂತು.
ಕಳ್ಳೆಪುರಿ ತಿಂದು ಹೊಟ್ಟೆ ತುಂಬಿಸಿಕೊಂಡರು ಸಿಎಂ ಕಾರ್ಯಕ್ರಮ 10 ಗಂಟೆಗೆ ನಿಗದಿಯಾಗಿತ್ತು, ನಂತರದಲ್ಲಿ 12 ಗಂಟೆಗೆ ಮುಂದೂಡಲ್ಪಟ್ಟಿತು, ಆದರೆ ಸಿಎಂ ಆಗಮಿಸಿ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಗುವಷ್ಟರಲ್ಲಿ ಸಮಯ ಮಧ್ಯಾಹ್ನ 1.15 ಮೀರಿತ್ತು. ಬೆಳಗ್ಗೆಯಿಂದ ಬಂದಿದ್ದ ಜನ ಮಧ್ಯಾಹ್ನದ ಊಟಕ್ಕಾಗಿ ಪರದಾಡಿದರು. ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದ ಕಳ್ಳೆಪುರಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಕಡೆಗೆ 2.30 ರ ವೇಳೆಗೆ ಭೋಜನಕ್ಕೆ ಅವಕಾಶ ಮಾಡಿಕೊಡಲಾಯಿತು. ಒಮ್ಮೆಲೆ ಸಾವಿರಾರು ಜನ ಮುಗಿಬಿದ್ದಿದ್ದರಿಂದ ಊಟದ ವ್ಯವಸ್ಥೆ ಅವ್ಯವಸ್ಥೆಯಾಗಿ ಮಾರ್ಪಟ್ಟಿತು.