ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಉದ್ಘಾಟಿಸಿದರು. ಶಾಸಕರಾದ ಎಂ.ಸತೀಶ್‌ರೆಡ್ಡಿ, ಸಿ.ಕೆ.ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ಎಚ್.ಎಸ್.ಗೋಪಿನಾಥರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಇದ್ದರು. 
ಜಿಲ್ಲೆ

ಧರ್ಮಾಧಾರಿತ ಬಜೆಟ್ ಮಂಡಿಸಿದ ಸಿಎಂ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಟೀಕೆ - 224 ಕ್ಷೇತ್ರಗಳ ಶಾಸಕರ ಕೈ ಕಟ್ಟಿ ನಿಲ್ಲಿಸಿದ ಸರ್ಕಾರ

ಸರ್ಜಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಾಧಾರಿತ ಬಜೆಟ್ ಮಂಡಿಸಿದ್ದು, ದೇಶದಲ್ಲಿ ಮೊದಲ ಬಾರಿಗೆ ಒಂದು ಧರ್ಮಕ್ಕೆ ಸೀಮಿತವಾಗಿರುವ ಬಜೆಟ್ ಅನ್ನು ರಾಜ್ಯದಲ್ಲಿ ಮಂಡಿಸಿರುವುದು ದುರಂತ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಕಿಡಿ ಕಾರಿದರು.

ಸರ್ಜಾಪುರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸರ್ಜಾಪುರ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಆಯ್ಕೆಯಾದವರಿಗೆ ಸನ್ಮಾನ ಮತ್ತು ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿಗಮಗಳಿಗೆ ಕೇವಲ 30 ಕೋಟಿ ಹಣ ಬಿಡುಗಡೆ ಮಾಡಿ, ವಕ್ಫ್ ಬೋರ್ಡ್ ಸಂರಕ್ಷಣೆಗೆ 150 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಕೇವಲ ಅಲ್ಪಸಂಖ್ಯಾತರ ರಕ್ಷಣೆಗೆ ನಿಂತಿದೆ ಎಂದು ರಾಜ್ಯದ ಜನರು ಮಾತನಾಡುತ್ತಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುವ ದಿಕ್ಕಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಚನೆ ಮಾಡುತ್ತಿಲ್ಲ ಎಂದರು.

ರಾಜ್ಯದಲ್ಲಿ ಯಾವುದೇ ಒಬ್ಬ ಶಾಸಕನು ತನ್ನ ಕ್ಷೇತ್ರದ ಅಭಿವೃದ್ಧಿ ಮಾಡಲು ಹಣ ಇಲ್ಲದೆ ವಿಫಲರಾಗಿದ್ದಾರೆ. ಹಾಗಾಗಿ 224 ಕ್ಷೇತ್ರಗಳ ಶಾಸಕರ ಕೈಯನ್ನು ಈ ಸರ್ಕಾರ ಕಟ್ಟಿ ನಿಲ್ಲಿಸಿದೆ. ಅದರಂತೆ ಕಾಂಗ್ರೆಸ್ ಗುಂಪುಗಾರಿಕೆಯಿಂದ ಕೆಲವೇ ದಿನಗಳಲ್ಲಿ ಸರ್ಕಾರ ಪತನವಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

ಮುಖಂಡರಾದ ಯಂಗಾರೆಡ್ಡಿ, ಟಿ.ವಿ.ಬಾಬು, ಹುಲ್ಲಹಳ್ಳಿ ಶ್ರೀನಿವಾಸ್, ಎಸ್.ವಿ.ರಾಘವೇಂದ್ರ, ಕೆ.ವಿ.ಶಿವಪ್ಪ, ದೊಮ್ಮಸಂದ್ರ ಜಯಣ್ಣ, ಮುರಳೀಕೃಷ್ಣ, ಪಿಎಲ್ ಡಿ.ಆಂಜಿನಪ್ಪ, ಎಸ್.ವಿ.ಟಿ.ಮಂಜುನಾಥ್ ರೆಡ್ಡಿ, ವಿಶ್ವನಾಥರೆಡ್ಡಿ, ಎಸ್.ಆರ್.ಗೋಪಾಲ್ ರೆಡ್ಡಿ, ಅರವಿಂದ್‌ರೆಡ್ಡಿ, ಸರ್ಜಾಪುರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರಾದ ಎಸ್.ವಿ.ಶ್ವೇತಾ ರಾಘವೇಂದ್ರ. ಜಿ.ಸುಧಾ, ಆಶಾಕಿರಣ್, ಹರೀಶ್ ಬಾಬು, ಪಿಲ್ಲಾರೆಡ್ಡಿ, ಭ್ರಮರೇಶ್, ಸುಬ್ಬಾರೆಡ್ಡಿ. ಪವನ್‌ಕುಮಾರ್, ವೆಂಕಟೇಶ್ ಇದ್ದರು.

ಸಂಘಕ್ಕೆ ಆಯ್ಕೆ: ಸರ್ಜಾಪುರದ ರೇಷ್ಮೆ ಬೆಳೆಗಾರರು, ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ನಂದಕುಮಾರ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ತಿಂಡ್ಲು ಸತೀಶ್‌ಗೌಡ ಮತ್ತು ನೂತನ ನಿರ್ದೇಶಕರನ್ನು ಬಿಜೆಪಿ ಮುಖಂಡರು ಸನ್ಮಾನಿಸಿದರು. ಕಳೆದ 25 ವರ್ಷಗಳಿಂದ ಸರ್ಜಾಪುರದ ರೈತರ ಸೇವಾ ಸಹಕಾರ ಸಂಘವನ್ನು ಬಿಜೆಪಿ ಬೆಂಬಲಿತ ನಿರ್ದೇಶಕರು ಮುನ್ನಡೆಸುತ್ತಿದ್ದು, ರಾಜ್ಯದಲ್ಲೇ ಒಂದು ಮಾದರಿ ಸಂಘವಾಗಿ ರೂಪುಗೊಂಡಿದೆ, ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಉಪಯೋಗವಾಗುವಂತಹ ಉತ್ತಮ ಯೋಜನೆಗಳನ್ನು ರೂಪಿಸಿ ರೈತರನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತೇವೆ. -ಸಿ.ಮುನಿರಾಜು ಬಿಜೆಪಿ ರಾಜ್ಯ ಕಾರ್ಯದರ್ಶಿ

ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದರೂ ಆನೇಕಲ್ ತಾಲೂಕಿನದಾದ್ಯತ್ಯಂತ ಇತ್ತೀಚೆಗೆ ನಡೆದ ಎಲ್ಲ ಸಹಕಾರಿ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ, ಈ ಭಾಗದಲ್ಲಿ ಬಿಜೆಪಿ ಅತ್ಯಂತ ಸದೃಢವಾಗಿ ಗಟ್ಟಿಯಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಪಕ್ಷದ ಕಾರ್ಯಕರ್ತರು ಅಧಿಕಾರ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕ್ಷೇತ್ರದಲ್ಲಿ ಪಕ್ಷದ ಶಾಸಕರನ್ನು ಗೆಲ್ಲಿಸಿ ಮತ್ತೊಮ್ಮೆ ಆನೇಕಲ್ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತು ಮಾಡುತ್ತೇವೆ ಎಂದು ಶಾಸಕ ಎಂ.ಸತೀಶ್‌ರೆಡ್ಡಿ ತಿಳಿಸಿದರು.