ತುಮಕೂರು: ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಗಣನೀಯ ಪ್ರಗತಿ ಸಾಧಿಸಿರುವುದನ್ನು ಗಮನಿಸಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತುಮಕೂರು ಜಿಪಂ ಸಿಇಒ ಜಿ.ಪ್ರಭುಗೆ ಪ್ರಶಂಸನಾ ಪತ್ರವನ್ನು ಹೊರಡಿಸಲು ಸಿಎಂ ಸೂಚಿಸಿರುವುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಮೇ 14 ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಮಣ್ಣಿನ ಫಲವತ್ತತೆಯ ರಾಷ್ಟ್ರೀಯ ಯೋಜನೆ (ಎಸ್ಎಚ್ಸಿ), ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ - (ಪಿಎಂಕೆಎಸ್ವೈ) , ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್ಕೆವಿವೈ), ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ವೈ) ಯೋಜನೆಗಳ ಅನುಷ್ಠಾನದಲ್ಲಿ ಗಣನೀಯ ಪ್ರಗತಿ ಸಾಧಿಸಿರುವುದನ್ನು ಗಮನಿಸಿ ಪ್ರಶಂಸನಾ ಪತ್ರವನ್ನು ಹೊರಡಿಸಲು ಸೂಚಿಸಿರುವುದಾಗಿ ಸಿಇಒ ಪ್ರಭುಗೆ ಬರೆದಿರುವ ಪತ್ರದಲ್ಲಿ ಶಾಲಿನಿರಜನೀಶ್ ತಿಳಿಸಿದ್ದಾರೆ.
ಈ ಉತ್ತಮ ಪ್ರಗತಿಯನ್ನು ಸಾಧಿಸಲು ಇಲಾಖಾಧಿಕಾರಿಗಳು ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ಅಚಲವಾದ ಬದ್ಧತೆ, ನಿರಂತರ ಶ್ರಮ ಹಾಗೂ ಸಮನ್ವಯದ ಕಾರ್ಯಪದ್ಧತಿಗೆ ಶ್ಲಾಘನೆ ಸಲ್ಲಬೇಕು. ನಿಮ್ಮ ತಂಡದ ಈ ಉತ್ಸಾಹ ಹಾಗೂ ಕಠಿಣ ಪರಿಶ್ರಮವೇ ಇಂತಹ ಯಶಸ್ಸಿಗೆ ನಾಂದಿಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿಯೂ ಇಂತಹುದೇ ಉತ್ಸಾಹದಿಂದ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸುತ್ತೇನೆ. ಪ್ರಗತಿಪಥದಲ್ಲಿ ತಮ್ಮ ಜಿಲ್ಲೆಯ ಸಾಧನೆ ಇತರ ಜಿಲ್ಲೆಗಳಿಗೂ ಪ್ರೇರಣೆಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.