ಜಿಲ್ಲೆ

ಸಿಎಂ ಕುರ್ಚಿ ಖಾಲಿ ಇಲ್ಲ

ಮುಖ್ಯಮಂತ್ರಿ ಆಕಾಂಕ್ಷಿಗಳಿಗೆ ಲಕ್ಷಿ ಹೆಬ್ಬಾಳ್ಕರ್​ ಟಾಂಗ್​

 ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಕಾಂಗ್ರೆಸ್​ ಶಿಸ್ತಿನ ಪಕ್ಷವಾಗಿದ್ದು ನಮ್ಮಲ್ಲಿ ಹೈಕಮಾಂಡ್​ ತೀರ್ಮಾನವೇ ಅಂತಿಮ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷಿ ಹೆಬ್ಬಾಳ್ಕರ್​ ಹೇಳಿದರು.

ನಗರದ ಬಾಲಭವನ ಆವರಣದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ನಾಯಕರಾದ ಸಿದ್ದರಾಮಯ್ಯಅವರು ಮುಖ್ಯಮಂತ್ರಿಗಳಾಗಿ ಉತ್ತಮ ಕೆಲಸ ಮಾಡುತ್ತಿದ್ದು ಸಿಎಂ ಚೇರ್​ ಖಾಲಿ ಇಲ್ಲ ಎಂದು ಸಿಎಂ ಆಕಾಂಗಳಿಗೆ ಪರೋಕ್ಷ ಟಾಂಗ್​ ಕೊಟ್ಟರು.

ಗೃಹಲಕ್ಷಿ ಖಾತೆ ಡಿಲಿಟ್​ ಆಗಿಲ್ಲ: ಗೃಹಲಕ್ಷಿ ಖಾತೆಗಳು ಈವರೆಗೆ ಒಂದು ಡಿಲಿಟ್​ ಆಗಿಲ್ಲ. ಯಾರು ಜಿಎಸ್​ಟಿ, ಆದಾಯ ತೆರಿಗೆ ಕಟ್ಟುತ್ತಾರೆ ಅಂತಹವರದ್ದು ಅಪ್​ ಲೋಡ್​ ಮಾಡಿದಾಗಲೇ ಡಿಲಿಟ್​ ಮಾಡಲಾಗಿದೆ. ನೋಂದಣಿ ಆದ ಬಳಿಕ ಯಾವುದನ್ನು ರದ್ದುಪಡಿಸಿಲ್ಲ ಎಂದು ಸಚಿವೆ ಲಕ್ಷಿ ಹೆಬ್ಬಾಳ್ಕರ್​ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎಲ್ಲಾ ಜಿಲ್ಲೆಗಳಿಗೂ ಗೃಹಲಕ್ಷಿ ಯೋಜನೆಯ 11 ನೇ ಕಂತು ಹಣಬಿಡುಗಡೆ ಆಗಿದ್ದು, ಶೀಘ್ರವೇ 12ನೇ ಹಾಗೂ 13ನೇ ಕಂತಿನ ಹಣಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವರು ಭರವಸೆಯಿತ್ತರು.

ಕೇಂದ್ರದತ್ತ ಬೊಟ್ಟು ಮಾಡಿದ ಲಕ್ಷಿ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಕೊಡಲಾಗುತ್ತದೆ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದಾಗ ನಾವು ರಾಜ್ಯ ಸರ್ಕಾರದ ಮ್ಯಾಚಿಂಗ್​ ಗ್ರಾ$ಂಟ್​ ಸೇರಿಸಿ ಸಂಬಳ ಕೊಡುತ್ತೇವೆ. ಕೇಂದ್ರದಿಂದ ಹಣ ಇನ್ನೂ ಬಂದಿಲ್ಲ. ಹಾಗಾಗಿ, ವಿಳಂಬವಾಗಿದ್ದು ಈಗಾಗಲೇ 3-4 ಬಾರಿ ಕೇಂದ್ರಕ್ಕೆ ಪತ್ರ ಬರದಿದ್ದೇವೆ ಎಂದು ಸಚಿವೆ ಲಕ್ಷಿ ಹೆಬ್ಬಾಳ್ಕರ್​ ಹೇಳಿದರು.

ಈ ರೀತಿಯ ಸಮಸ್ಯೆ ಇದೇ ಮೊದಲೇನಲ್ಲ. ನಮ್ಮ ಇಲಾಖೆ ನಿರ್ದೇಶಕರು ಮೊನ್ನೆಯಷ್ಟೇ ದೆಹಲಿಗೆ ಹೋಗಿ ಬಂದಿದ್ದಾರೆ. ಆದಷ್ಟು ಬೇಗ ಅಂಗನವಾಡಿ ಕಾರ್ಯಕರ್ತರಿಗೆ ಅದರಲ್ಲು ಗೌರಿ-ಗಣೇಶ ಹಬ್ಬದೊಳಗೆ ಸಂಬಳ ನೀಡುವ ಪ್ರಯತ್ನ ಮಾಡಲಾಗುವುದು. ನಮ್ಮ ಇಲಾಖೆಯಲ್ಲಿ ಬಹಳಷ್ಟು ಯೋಜನೆಗಳಿಗೆ ಕೇಂದ್ರ, ರಾಜ್ಯ ಸರ್ಕಾರದ ಅನುದಾನ ಬಳಕೆ ಆಗುತ್ತದೆ. ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.