ಕಾಸರಗೋಡು : ಜಿಲ್ಲೆಯ ಎಲ್ಲ 48 ಸ್ಥಳೀಯಾಡಳಿತ ಸಂಸ್ಥೆ ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಆನ್‌ಲೈನ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಯೋಜಿಸಿದ್ದರು. ಕಾಸರಗೋಡು ಜಿಲ್ಲೆಯ 38 ಗ್ರಾಪಂ, 3 ನಗರಸಭೆ, ಜಿಲ್ಲಾ ಪಂಚಾಯಿತಿ, ಆರು ಬ್ಲಾಕ್ ಪಂಚಾಯಿತಿಗಳು ಸೇರಿದಂತೆ 48 ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆ ಆಯೋಜಿಸಲಾಗಿತ್ತು.
ಕಾಸರಗೋಡು ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಾಸ್ಮಿನ್ ಕಬೀರ್, ಶೈಲಜಾ, ಶಿನೋಜ್ ಚಾಕೊ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಇತರರು ಭಾಗವಹಿಸಿದ್ದರು.
ಬಡತನ ನಿರ್ಮೂಲನೆ, ಗುಣಮಟ್ಟ ಆಧಾರಿತ ಉಪಶಾಮಕ ಆರೈಕೆ, ತ್ಯಾಜ್ಯ ಮುಕ್ತ ಕೇರಳ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆ ನೇರ ಪಾತ್ರ ವಹಿಸುತ್ತವೆ. ಈ ಚಟುವಟಿಕೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದರ ಜತೆಗೆ ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.