ಜಿಲ್ಲೆ

ಸಿಎಂ ಮಧ್ಯಸ್ಥಿಕೆ ವಹಿಸಲು ಹಿಂದೇಟು

ರುದ್ರಪ್ಪ ವಾಲಿ

ಹರಪನಹಳ್ಳಿ: ಬಿಜೆಪಿಯ ಅವಧಿಯಲ್ಲಿ ಸಮಾಜದ 10 ಲಕ್ಷ ಜನರು ಹೋರಾಟ ಮಾಡಿದ್ದರು. ಆದರೆ, ಆಗ ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ ಎಂದು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಬೆಟ್ಟನಗೌಡ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2ಎ ಮೀಸಲಾತಿ ಹೋರಾಟದ ವೇಳೆ ಮುಖ್ಯಮಂತ್ರಿ ಮಧ್ಯಸ್ಥಿಕೆ ವಹಿಸಲು ಹಿಂದೇಟು ಹಾಕಿದ್ದನ್ನು ಖಂಡಿಸಿ ಕೆಲವರು ಸಮನ್ವಯದ ಕೊರತೆಯಿಂದ ಕಲ್ಲು ತೂರಾಟ ಮಾಡಲು ಯತ್ನಿಸಿದ್ದಾರೆ. ಆಗ ಪೊಲೀಸರು ನಿಯಂತ್ರಿಸುವುದು ಬಿಟ್ಟು ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ ಎಂದರು.

ಪಂಚಮಸಾಲಿ ಮಹಾಸಭಾ ಕೂಡಲ ಸಂಗಮ ಪೀಠದ ತಾಲೂಕು ಅಧ್ಯಕ್ಷ ಕೆ.ಪ್ರಭಾಕರ್ ಮಾತನಾಡಿ, ನಾವು ಶಾಂತ ರೀತಿಯಿಂದ ಹೋರಾಟ ನಡೆಸುತ್ತಿದ್ದೆವು. ಆದರೆ, ಸರ್ಕಾರ ನೆಪ ಮಾತ್ರಕ್ಕೆ ಮೂವರು ಸಚಿವರನ್ನು ಕಳಿಸಿದ್ದರಿಂದ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಯಿತು ಎಂದರು. ನಮ್ಮ ಸಮಾಜದವರೇ ಆದ ವಿಜಯಾನಂದ ಕಾಶಪ್ಪನವರು, ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಮಾಜಕ್ಕೆ ಮೀಸಲಾತಿಯ ಕುಂಟು ನೆಪ ಹೇಳುತ್ತ ತಮ್ಮ ಬೇಳೆ ಬೇಯಿಸುಕೊಳ್ಳುವಲ್ಲಿ ಸಫಲರಾದರು.

ಈಗ ಕಾಂಗ್ರೆಸ್ ಆಡಳಿತದಲ್ಲಿದ್ದು, ಸಮಾಜದ ಬಗ್ಗೆ ಯಾವುದೇ ಕಾಳಜಿಯ ಮಾತನ್ನು ಆಡದೆ, ಕೂಡಲಸಂಗಮ ಪೀಠದ ಶ್ರೀಗಳನ್ನು ದೂಷಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಮುಖರಾದ ಶಶಿಧರ್ ಪೂಜಾರ್, ಅಡವಿಹಳ್ಳಿ ಮಂಜುನಾಥ, ಚನ್ನನಗೌಡ, ಪ್ರಶಾಂತ್ ಪಾಟೀಲ್, ವೀರಣ್ಣ, ಮಹೇಶ್ ಪೂಜಾರ್, ಕರಿಬಸವರಾಜ್, ಸುರೇಶ್ ಶಾನಭೋಗರ, ಬಸವರಾಜ್ ಮುಲಾಲಿ, ಬಣಕಾರ್ ಜಗದೀಶ್, ಎನ್.ಜಿ.ಸಿದ್ದೇಶ್ ಇತರರಿದ್ದರು.