ವಿಜಯವಾಣಿ ಸುದ್ದಿಜಾಲ ಧಾರವಾಡ
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬೇಡಿಕೆ, ಹೋರಾಟ ಹಲವು ವರ್ಷಗಳಿಂದ ಮುಂದುವರಿದಿದೆ. ಈ ವಿಚಾರವಾಗಿ ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಗೃಹಕಚೇರಿಯಲ್ಲಿ ಅ. 18ರಂದು ಸಭೆ ಕರೆದಿದ್ದಾರೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಗೆ ಸಮರ್ಪಕವಾಗಿ ಸ್ಪಂದಿಸಿಲ್ಲ. ಅವರು 2 ಬಾರಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಬೇಡಿಕೆ ಈಡೇರಿಕೆಗಾಗಿ ಸಮಾಜದ ವಕೀಲರೂ ಪ್ರತಿಭಟನೆ ಮಾಡಿದರು. ಇದೀಗ ಸಿದ್ದರಾಮಯ್ಯ ಅವರು 18ರಂದು ಸಭೆ ಕರೆದಿದ್ದಾರೆ. ನಾನು ಮತ್ತು ಸಮಾಜದ 11 ವಕೀಲರ ನಿಯೋಗ ಸಿಎಂ ಭೇಟಿಗೆ ತೆರಳಲಿದ್ದೇವೆ. ಸಭೆಯಲ್ಲಿ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬ ಆಶಾವಾದ ಇದೆ. ಲಿಂಗಾಯತ ಸಮಾಜದ ಎಲ್ಲ ಶಾಸಕರು ಸಭೆಗೆ ಬರಬೇಕು ಎಂದು ಸ್ವಾಮೀಜಿ ಆಹ್ವಾನಿಸಿದರು.
ಮುಖಂಡರಾದ ಸಿ.ಎಸ್. ನೇಗಿನಹಾಳ, ಸಿ.ಆರ್. ಮೆಣಸಿನಕಾಯಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.