ಜಿಲ್ಲೆ

ಬೆ-ಮೈ ಹೆದ್ದಾರಿಯಲ್ಲಿ ಮೂಲಸೌಲಭ್ಯ ಕಲ್ಪಿಸಲು ಮುಖ್ಯಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಸೂಚನೆ: ಎಂಎಲ್‌ಸಿ ದಿನೇಶ್ ಗೂಳಿಗೌಡ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿನ ಸಮಸ್ಯೆ ಬಗೆಹರಿಸಿಕೊಡುವಂತೆ ಜಿಲ್ಲೆಯ ಶಾಸಕರು ಮಾಡಿದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾಗೆ ಬುಧವಾರ ಸೂಚನೆ ನೀಡಿದ್ದಾರೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿನ ಸರ್ವಿಸ್ ರಸ್ತೆಗಳು, ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳದಿರುವುದು, ಈಗಾಗಲೇ ಈ ಭಾಗದಲ್ಲಿ ಎರಡೆರಡು ಕಡೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸದಿರುವ ಬಗ್ಗೆ ತಾನು ಮತ್ತು ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ ಅವರು ಇತ್ತೀಚೆಗೆ ಸಿಎಂಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ತುರ್ತು ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯುವಂತೆ ಮುಖ್ಯಕಾರ್ಯದರ್ಶಿಗೆ ಸಿಎಂ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮ ವಹಿಸುವಂತೆ ಪಿಡಬ್ಲ್ಯುಡಿ ಮುಖ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆಂದಿದ್ದಾರೆ.

ಶಾಸಕರ ದೂರಿನಲ್ಲೇನಿತ್ತು?: ಬೆಂ-ಮೈ ನಡುವಿನ ದಶಪಥ ಹೆದ್ದಾರಿ ಮಾರ್ಚ್‌ನಲ್ಲಿ ಲೋಕಾರ್ಪಣೆಗೊಂಡಿದೆ. ಇದರಿಂದ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಶೀಘ್ರ ಸಂಚಾರಕ್ಕೆ ಅನುಕೂಲವಾಗಿದೆ ಎಂಬ ಅಂಶ ಬಿಟ್ಟರೆ ಇದು ಜನರಿಗೆ ನಿಜಕ್ಕೂ ಜೇಬು ಸುಡುವ ರಹದಾರಿಯಾಗಿದೆ. ಈ ಮಾರ್ಗದಲ್ಲಿ ಜನರು ಟೋಲ್ ಕಟ್ಟಿ ಕಟ್ಟಿ ಬಸವಳಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈಗ ಇದ್ದದ್ದು ಸಾಲದೆಂಬಂತೆ ಶ್ರೀರಂಗಪಟ್ಟಣದಲ್ಲಿ ಸಹ ಜು.1ರಿಂದ ಟೋಲ್ ಸಂಗ್ರಹಕ್ಕೆ ಮುಂದಾಗಲಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ. ಇದಕ್ಕೆ ತಕ್ಕಂತೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಲಾಗುತ್ತಿತ್ತು.

ಇಲ್ಲಿ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆಯೆ? ಎಂಬುದನ್ನು ನೋಡುವುದಾದರೆ ಖಂಡಿತವಾಗಿಯೂ ಆಗಿಲ್ಲ. ಆಗಬೇಕಿರುವ ಕಾಮಗಾರಿಗಳು ಹತ್ತಾರು ಇವೆ. ಅವುಗಳು ಇನ್ನೂ ಕುಂಟುತ್ತಾ ಸಾಗಿವೆ. ಕೇಳಿದರೆ ಕುಂಟು ನೆಪಗಳನ್ನು ಹೇಳಲಾಗುತ್ತದೆ. ಆದರೆ, ಜನರಿಂದ ದುಡ್ಡು ಪಡೆಯಲು ಮಾತ್ರ ಇದಾವುದೂ ಲೆಕ್ಕಕ್ಕೆ ಬಾರದು ಎಂದರೆ ಹೇಗೆ?. ಉದಾಹರಣೆಯಾಗಿ ಹೇಳುವುದಾದರೆ, ಮಂಡ್ಯ ತಾಲೂಕಿನ ಹನಕೆರೆ ಅಂಡರ್‌ಪಾಸ್, ಹಳೇ ಬೂದನೂರು ಹಾಗೂ ಹೊಸ ಬೂದನೂರು ನಡುವಿನ ಸರ್ವಿಸ್ ರಸ್ತೆಗೆ ನಿರ್ಮಾಣ ಮಾಡುತ್ತಿರುವ ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ಇನ್ನು ಹಲವು ಕಡೆ ಸರ್ವಿಸ್ ರಸ್ತೆ ಕಾಮಗಾರಿ ಸಹ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಟೋಲ್ ಸಂಗ್ರಹ ಮಾಡುವುದು ಸರಿ ಅಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಡೆ ಖಂಡನಾರ್ಹವಾಗಿದೆ. ಆದ್ದರಿಂದ ಸಿಎಂ ಅವರು ಮಧ್ಯಪ್ರವೇಶ ಮಾಡಬೇಕು. ಸರ್ವಿಸ್ ರಸ್ತೆಗಳು ಸೇರಿದಂತೆ ಇನ್ನಿತರ ಕಾಮಗಾರಿ ಪೂರ್ಣವಾಗುವ ಸಂಬಂಧ ಕ್ರಮ ವಹಿಸಬೇಕು ಎಂದು ಮನವಿ ಮಾಡಲಾಗಿತ್ತೆಂದು ವಿವರಿಸಿದ್ದಾರೆ.