ಜಿಲ್ಲೆ

ಉತ್ತರದಾಯಿತ್ವ ಹೊಂದಿದ ಡಬಲ್ ಇಂಜಿನ್ ಸರ್ಕಾರ ಫಲಾನುಭವಿಗಳ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು; ಪ್ರಜಾಪ್ರಭುತ್ವದಲ್ಲಿ ನಂಬಿಕೆ ಬರಬೇಕಾದರೆ ಸರ್ಕಾರ ಉತ್ತರದಾಯಿತ್ವ ಆಗಿರಬೇಕು. ರಾಜ್ಯದ ಡಬಲ್ ಇಂಜಿನ್ ಸರ್ಕಾರ ಸಮಗ್ರ ಅಭಿವೃದ್ಧಿ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.


ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಗುರುವಾರ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಜನರ ಬದುಕಿನ ಜೀವನಾಡಿಯ ಮೇಲೆ ಅಸ್ತಿತ್ವವನ್ನು ಹೊಂದಿದೆ. ಜಾತಿ, ಮತ, ಪಂಥದ ಆಧಾರದ ಮೇಲೆ ಪ್ರಜಾಪ್ರಭುತ್ವ ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂದರು.


ಯಾವುದೇ ಜಾತಿ, ಧರ್ಮದ ಪ್ರಜೆಗೆ ಮೂಲ ಸೌಲಭ್ಯ, ನಂಬಿಕೆ, ಸಂಸ್ಕೃತಿ, ಸಂಸ್ಕಾರ, ಧರ್ಮವನ್ನು ಮುನ್ನಡೆಸುವ ಸ್ವಾತಂತ್ರೃ ಅವಶ್ಯ. ಅಭಿವೃದ್ಧಿ ಎಲ್ಲರನ್ನು ಒಳಗೊಂಡಂತೆ ಇರಬೇಕು. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ವ ಜನರನ್ನು ಸಮಾನವಾಗಿ ಕಾಣುವ ಮೂಲಕ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಎಂದರು.


ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿಯಾಗಿದೆ. ಸರ್ಕಾರದ ಪ್ರತಿಯೊಂದು ಯೋಜನೆಗಳು ಮನೆ ಮನೆಗೆ ತಲುಪಿದ್ದು, ಜನತೆಯ ಜೀವನ ಮಟ್ಟ ಸುಧಾರಣೆಯಾಗಿದೆ. ರಾಜ್ಯದಲ್ಲಿ 13 ಲಕ್ಷ ರೈತರ ಮಕ್ಕಳಿಗೆ, ದ.ಕನ್ನಡ ಜಿಲ್ಲೆಯಲ್ಲಿ 41,859 ಮಕ್ಕಳಿಗೆ ವಿದ್ಯಾನಿಧಿ ನೀಡಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ 53,43,000 ರೈತರಿಗೆ, ದ.ಕನ್ನಡ ಜಿಲ್ಲೆಯಲ್ಲಿ 1,39,571 ರೈತರಿಗೆ ಸವಲತ್ತು ದೊರಕಿದೆ ಎಂದರು


ಬಿಜೆಪಿ ಸರ್ಕಾರ ಭಾಷಣಕ್ಕೆ ಮಾತ್ರ ಸೀಮಿತವಾಗಿಲ್ಲ, ಕೆಲಸ ಮಾಡಿ ತೋರಿಸಿದ್ದೇವೆ. ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ, ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ, ನಾರಾಯಣಗುರು ವಸತಿ ಶಾಲೆಗಳ ಸ್ಥಾಪನೆ, ಗಾಣಿಗರಿಗೆ ನಿಗಮ ಸ್ಥಾಪನೆ, ಸಿಆರ್‌ಝೆಡ್ ನಿಯಮಾವಳಿ ಸರಳೀಕರಣ, ಮರೀನಾ ಮಂಜೂರಾತಿ, ಕಡಲ್ಕೊರೆತ ತಡೆಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಬಟ್ಟಂಪಾಡಿಯಲ್ಲಿ ಸೀ ವೇವ್ ಬ್ರೇಕರ್ ಮೊದಲಾದ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನವನ್ನು ನಮ್ಮ ಸರ್ಕಾರ ನೀಡಿದೆ ಎಂದರು.


ಇದೇ ಸಂದರ್ಭ ಅವರು, ಮಂಗಳೂರಿನ ಹಳೇ ಬಂದರಿನಲ್ಲಿ 6.25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತೇಲುವ ಮೀನುಗಾರಿಕಾ ಜೆಟ್ಟಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ವಿವರದ ಕೃತಿ ಹಾಗೂ ನಿಸರ್ಗ ಪಬ್ಲಿಸಿಟಿ ಸಂಸ್ಥೆ ರಚಿಸಿದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಗ್ರ ಛಾಯಾಚಿತ್ರಗಳ ಕೃತಿ ‘ಕರಜನ’ ವನ್ನು ಸಿಎಂ ಬಿಡುಗಡೆಗೊಳಿಸಿದರು.