ಜಿಲ್ಲೆ

ಸಿ.ಎಂ.ಇಬ್ರಾಹಿಂ ನಿಲುವು ಸರಿಯಾಗಿದೆ

ಮಂಜುನಾಥ ತಿಮ್ಮಯ್ಯ

ಮೈಸೂರು; ಜಾತ್ಯತೀತವಾದವನ್ನು ಕೊಲೆ ಮಾಡಿ ಜಾತಿವಾದಿ, ಕೋಮುವಾದಿಗಳೊಂದಿಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮದುವೆಯಾದರೆ ಒಪ್ಪಲು ಸಾಧ್ಯವೇ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.


ಮಂಗಳವಾರ ದಸರಾ ಕವಿಗೋಷ್ಠಿ ಉದ್ಘಾಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾವು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಇಂಡಿಯಾ ಮೈತ್ರಿಕೂಟಕ್ಕೆ ನಮ್ಮ ಬೆಂಬಲ’ ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನಿಲುವು ಸರಿ ಇದೆ. ಕುಮಾರಸ್ವಾಮಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಅವರಿಗೆ ಸಂಪೂರ್ಣ ಅಧಿಕಾರ ಇದೆ ಎಂದರು.


ದಸರಾದಲ್ಲಿ ಅಧಿಕಾರಿಗಳ ದರ್ಬಾರ್:


ದೀಪಾಲಂಕಾರ ನೋಡಿದರೆ ದಸರಾ ಚೆನ್ನಾಗಿದೆ ಎನಿಸುತ್ತದೆ. ಇನ್ನುಳಿದ ಕಾರ್ಯಕ್ರಮಗಳನ್ನು ನೋಡಿದರೆ ದಸರಾ ಕಳೆಗುಂದಿದ್ದು, ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ ಎಂದು ವಿಶ್ವನಾಥ್ ಕಿಡಿಕಾರಿದರು.
ಮೈಸೂರು ದಸರಾಗೆ ತನ್ನದೇ ಆದ ಮಹತ್ವ ಇದೆ. ಇನ್ನಷ್ಟು ಚೆನ್ನಾಗಿ ದಸರಾ ಮಾಡಬಹುದಿತ್ತು. ದಸರಾದ ಯಾವ ಕಾರ್ಯಕ್ರಮಗಳಲ್ಲೂ ಜನಪ್ರತಿನಿಧಿಗಳ ಉಪಸ್ಥಿತಿ ಇಲ್ಲ. ಅಧಿಕಾರಿಗಳ ದರ್ಬಾರ್ ಎದ್ದುಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ವಿಧಾನ ಪರಿಷತ್‌ನಲ್ಲಿ ನಾನು ಸಾಹಿತ್ಯ ವಲಯವನ್ನು ಪ್ರತಿನಿಧಿಸುತ್ತಿದ್ದೇನೆ. ನನ್ನನ್ನು ಹೇಗೆ ಉಪಯೋಗಿಸಬೇಕಿತ್ತು? ಆದರೆ, ಕವಿಗೋಷ್ಠಿ ಬಗ್ಗೆ ನನ್ನ ಅಭಿಪ್ರಾಯವನ್ನೂ ಕೇಳಿಲ್ಲ. ಹೀಗೆ ಯಾರ ಅಭಿಪ್ರಾಯನ್ನೂ ಪಡೆಯದೆ, ಅಧಿಕಾರಿಗಳು ತಮ್ಮಿಷ್ಟದಂತೆ ದಸರಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ದಸರಾಕ್ಕೂ ಮುನ್ನ ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಸಲಹೆ, ಸೂಚನೆ ಪಡೆಯಬೇಕಿತ್ತು ಎಂದರು.


ಅರಮನೆ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿ ಮುಂಬೈ, ಹೈದ್ರಾಬಾದ್, ಚೆನ್ನೈ, ತಂಜಾವೂರುಗಳಿಂದ ದೊಡ್ಡ ಸಂಗೀತಗಾರರು, ಕಲಾವಿದರನ್ನು ಕರೆಸಲಾಗಿತ್ತು. ಅವರ‌್ಯಾರೂ ಹಣಕ್ಕಾಗಿ ಬರಲಿಲ್ಲ. ದಸರಾದಲ್ಲಿ ಅವಕಾಶ ದೊರೆಯಿತು ಎಂಬ ಸಂತೋಷದಿಂದ ಬರುತ್ತಿದ್ದರು. ಅವರಿಗೆ ವಿಮಾನ ಖರ್ಚು, ಉಳಿದುಕೊಳ್ಳಲು ವ್ಯವಸ್ಥೆ, ಸ್ವಲ್ಪ ಗೌರವಧನ ನೀಡಿದರೆ ಸಾಕಿತ್ತು. ಆದರೆ ಈಗ ನಡೆಯುತ್ತಿರುವುದೇನು? ನೀನೂ ಸ್ವಲ್ಪ ತಗೋ, ನನಗೂ ಸ್ವಲ್ಪ ಕೊಡು ಎನ್ನುವಂತಾಗಿರುವುದು ನಾಚಿಕೆಗೇಡು ಎಂದು ಕಿಡಿಕಾರಿದರು.


ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬರಗಾಲ ಆವರಿಸಿತ್ತು. ಪ್ರಾಯೋಜಕತ್ವದಲ್ಲಿ ಅಚ್ಚುಕಟ್ಟಾಗಿ ದಸರಾ ಆಚರಣೆ ಮಾಡಲಾಗಿತ್ತು. 3.5 ಕೋಟಿ ರೂ. ಉಳಿಸಲಾಗಿತ್ತು. ಈಗ ಪ್ರಾಯೋಜಕತ್ವ ಪಡೆದು ದಸರಾ ಮಾಡುವುದು ಬಿಟ್ಟು ಸರ್ಕಾರ ಏಕೆ 30 ಕೋಟಿ ರೂ. ಖರ್ಚು ಮಾಡಬೇಕು ಎಂದು ಪ್ರಶ್ನಿಸಿದರು.
ಪ್ರಾಯೋಜಕತ್ವ ಕುರಿತು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಕರೆದು ಸಮಾಲೋಚಿಸಿ, ಉದ್ದಿಮೆದಾರರಿಗೆ ಸೂಚಿಸಬಹುದಿತ್ತು. ಆ ಕೆಲಸವೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.