ಜಿಲ್ಲೆ

ಬಿಜೆಪಿ ಗೆಲ್ಲಿಸುವುದೇ ಕಾಂಗ್ರೆಸ್​ ಅಜೆಂಡಾ ನಿಖಿಲ್​ ಸೋಲಿಸಲು ಷಡ್ಯಂತ್ರ ಸಿ.ಎಂ. ಇಬ್ರಾಹಿಂ ವಾಗ್ದಾಳಿ

ಗಂಗಾಧರ ಬಿ ವಿ

ರಾಮನಗರ

ನಿಖಿಲ್​ ಕುಮಾರಸ್ವಾಮಿ ಸೋಲಿಸಲು ಕಾಂಗ್ರೆಸ್​ ಷಡ್ಯಂತ್ರ ನಡೆಸಿದೆ. ರಾಮನಗರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಮತ್ತು ಜೆಡಿಎಸ್​ ಪಕ್ಷದ ನಡುವೆ ವೈಮನಸ್ಸು ಸೃಷ್ಟಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಅವರ ಅಜೆಂಡಾ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಪರ ನಗರದ ವಿವಿಧ ವಾರ್ಡ್​ಗಳಲ್ಲಿ  ಮತಯಾಚನೆ, ಅಲ್ಪಸಂಖ್ಯಾತ ಮುಖಂಡರ ಸಮಾವೇಶ ಮತ್ತು ಬೈಕ್​ ರ್ಯಾಲಿ ನಡೆಸಿ ನಗರದ ಸಿಎಂಸಿ ಕಾಂಪ್ಲೆಕ್ಸ್​ ಬಳಿ ಬೈಕ್​ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್​ ಗೆಲ್ಲಿಸುವುದಾಗಿದ್ದರೆ, ಡಿ.ಕೆ. ಶಿವಕುಮಾರ್​ ಅವರಿಗೆ ಧೈರ್ಯವಿದ್ದಿದ್ದರೆ ರಾಮನಗರ ಕ್ಷೇತ್ರದಿಂದ ಸೋದರ ಡಿ.ಕೆ. ಸುರೇಶ್​ ಅಥವಾ ಅಳಿಯನನ್ನು ಕಾಂಗ್ರೆಸ್​ ಅಭ್ಯರ್ಥಿ ಮಾಡಬೇಕಿತ್ತು, ಅವರಿಗೆ ಕಾಂಗ್ರೆಸ್​ ಅಭ್ಯರ್ಥಿ ಸೋಲುತ್ತಾರೆ ಎಂದು ತಿಳಿದಿರುವುದರಿಂದಲೇ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಇಬ್ರಾಹಿಂ ಮಾತಿನ ಛಾಟಿ ಬೀಸಿದರು.

ನಿಖಿಲ್​ಗೆ ರಾಜಕೀಯ ಅಸ್ತಿತ್ವ ಕಟ್ಟಿಕೊಡಲಿದೆ ರಾಮನಗರ

ರಾಮನ ಹೆಸರಿನ ರಾಮನಗರದ ರಾಮಭೂಮಿ ನಿಖಿಲ್​ ಕುಮಾರಸ್ವಾಮಿ ಅವರಿಗೆ ರಾಜಕೀಯ ಅಸ್ತಿತ್ವವನ್ನು ಕಟ್ಟಿಕೊಡಲಿದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದರು. ರಾಮನಗರ ಕೆಂಗಲ್​ ಹನುಮಂತಯ್ಯ, ಎಚ್​.ಡಿ. ದೇವೇಗೌಡರು, ಎಚ್​.ಡಿ. ಕುಮಾರಸ್ವಾಮಿ ಅವರಿಗೆ ರಾಜಕೀಯದಲ್ಲಿ ಸ್ಥಾನಮಾನ ಕಲ್ಪಿಸಿದ ಪುಣ್ಯಭೂಮಿ. ಇದೇ ಭೂಮಿಯಲ್ಲಿ ನಿಖಿಲ್​ಗೂ ದೊಡ್ಡ ಮಟ್ಟದಲ್ಲಿ ಜನ ಆಶೀರ್ವಾದ ಮಾಡಲಿದ್ದಾರೆ. ಜೆಡಿಎಸ್​ ಪಕ್ಷ ಜಾತಿ ಆಧಾರದ ಮತ ಯಾಚಿಸುವುದಿಲ್ಲ. ಜನರು ಎರಡೂ ಪಕ್ಷಗಳನ್ನು ನೋಡಿದ್ದಾರೆ. ಕಳೆದ ಬಾರಿ ಚುನಾವಣೆಗೂ 2023ರ ಚುನಾವಣೆಗೂ ವ್ಯತ್ಯಾಸವಿದೆ. ಈಗ ಯಾವುದೇ ಗೊಂದಲವಿಲ್ಲ. ಈ ಬಾರಿ ಜೆಡಿಎಸ್​ಗೆ ಮುಸ್ಲಿಮರು ಬೆಂಬಲಿಸಿದ್ದು, ಉತ್ತಮ ಫಲಿತಾಂಶ ಬರಲಿದೆ ಎಂದರು.

ತಾಲೂಕು ಜೆಡಿಎಸ್​ ಅಧ್ಯಕ್ಷ ರಾಜಶೇಖರ್​, ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್​, ಅಲ್ಪಸಂಖ್ಯಾತ ಮುಖಂಡರಾದ ಸುಹೇಲ್​, ಮುನ್ಹಾಜಿಲ್​ ಆಗಾ,  ಆರಿಫ್​ ಖುರೇಷಿ, ಹಾಗೂ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.