ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರು ಪುರುಸೊತ್ತಿದ್ದಾಗ ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದು ಅವರ ಮನಃಪರಿವರ್ತನೆ ಆಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶ್ರೀರಾಮಮಂದಿರ ನಿರ್ಮಾಣದ ಬಳಿಕ ಕಾಂಗ್ರೆಸ್‌ನವರಿಗೆ ಈಗಲಾದರೂ ಒಳ್ಳೆಯ ಬುದ್ದಿ ಬಂದಿದೆ. ಸಿಎಂ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅಯೋಧ್ಯೆಗೆ ಭೇಟಿ ನೀಡಲಿ ಎಂದು ಸುದ್ದಿಗೋಷ್ಠಿಯಲ್ಲಿ ಹಾರೈಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರ ರಚನೆ ಆದ ಬಳಿಕ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬಂದಿದ್ದರು. ಅವರಿಗೆ ಮುಜುಗರ ಮಾಡಬಾರದೆಂಬ ಕಾರಣಕ್ಕೆ ಯುವನಿಧಿ ಕಾರ್ಯಕ್ರಮದಲ್ಲಿ ಆಕ್ಷೇಪಿಸಲಿಲ್ಲ. ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ಎಲ್ಲ ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪೂರ್ಣಗೊಳಿಸಿದವರಿಗೆ ಯುವನಿಧಿ ಭತ್ಯೆ ನೀಡಬೇಕು ಎಂದರು.