ಜಿಲ್ಲೆ

ಜಿಲ್ಲೆಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡದ ಸಿಎಂ

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಕೆ ಸಮಾರಂಭಕ್ಕೆ ಭಾಗವಹಿಸುವುದಕ್ಕೆ ಸಮಯವಿದೆ. ಆದರೆ, ಜಿಲ್ಲೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳುವ ಸಮಯವಿಲ್ಲ ಎಂಬುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ನಗರ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಒಳಗಾಗಿದ್ದ ಐವರು ಬಾಣಂತಿಯರು ಸಾವು ರಾಜ್ಯವೇ ಬೆಚ್ಚಿ ಬೀಳಿಸಿದೆ. ಈಗಾಗಲೇ ತನಿಖೆ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸಿ ಐವಿ ದ್ರಾವಣ ಪೂರೈಕೆಯಿಂದ ಮೃತಪಟ್ಟಿದ್ದಾರೆ ವರದಿಯಲ್ಲಿ ಬಹಿರಂಗಪಡಿಸಿದೆ. ಆದರೆ, ಈವರೆಗೂ ಯಾವುದೇ ಕ್ರಮವಹಿಸದ ರಾಜ್ಯ ಸರ್ಕಾರ ಮಾತ್ರ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಜಿಲ್ಲೆಯ ಬಾಣಂತಿಯರ ಸಾವಿನಿಂದ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಗೆ ತೆರಳಲು ರೋಗಿಗಳು ಹಾಗೂ ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರೆ. ಬಡವರು ಸಾವಿರಾರು ವ್ಯಯಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಲ್ಲಿ ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಿ ಆಸ್ಪತ್ರೆಗಳತ್ತ ಸೆಳೆಯಬೇಕಿದ್ದು ಬಿಟ್ಟು ಕಾಲಹರಣ ಮಾಡುವಂತೆ ಕಾಣುತ್ತಿದೆ.

ಹೇಳಿಕೆಯಲ್ಲಿ ಕಳೆದ ಸಿಎಂ : ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ತುಕಾರಾಮ್ ಅಭೂತಪೂರ್ವ ಗೆಲವು ಸಾಧಿಸಿದ್ದಾರೆ. ಇದರ ಹಿನ್ನಲೆ ಮತದಾರರಿಗೆ ಕೃತಜ್ಞತೆ ಸಲ್ಲಿಕೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಬಳಿಕ ಹುಬ್ಬಳ್ಳಿಗೆ ತೆರಳಲಿದ್ದಾರೆ ಎಂಬುದಾಗಿ ಜಿಲ್ಲಾಡಳಿತದಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿರುವುದರ ಬಗ್ಗೆ ಮಾಹಿತಿ ತಿಳಿದಿರುವ ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ಬಿಮ್ಸ್ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಮಯವಿಲ್ಲ. ಮತದಾರರು ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ ಎಂಬ ಮನೋಭಾವದಿಂದ ಕೃತಜ್ಞತೆ ಸಲ್ಲಿಸಲು ಮಾತ್ರ ಆಸಕ್ತಿ ತೋರಿದ್ದಾರೆ. ಈಗ ಮೃತಪಟ್ಟಿರುವ ಐವರು ಬಾಣಂತಿಯರು ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರದವರೆ ಎಂಬುದು ಮರೆಯಬಾರದು. ಅಲ್ಲದೆ, ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ ಎಂಬ ಮಾಹಿತಿ ಪಡೆದಿದ್ದ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿಯೇ ಮೂರು ದಿನ ಬೀಡು ಬಿಟ್ಟು ಅಭ್ಯರ್ಥಿ ಪರ ಬೆವರು ಹರಿಸಿ 18 ಬಹಿರಂಗ ಸಮಾವೇಶದಲ್ಲಿ ಪಾಲ್ಗೂಂಡರು. ಆದರೆ, ಮೂರು ತಾಸು ಜಿಲ್ಲೆಯ ಮೃತ ಬಾಣಂತಿಯರ ಕುಟುಂಬಕ್ಕೆ ಸಾಂತ್ವನ ಹೇಳುವ ಸೌಜನ್ಯ ಏಕೆ ತೋರುತ್ತಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ. ಅಲ್ಲದೆ, ಕಳೆದ ನ. 27 ರಂದು ನಗರದಲ್ಲಿ ಹಮ್ಮಿಕೊಂಡಿದ್ದ ಧರ್ಮಕ್ಷೇತ್ರದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಎರಡು ನೂರು ಮೀಟರ್ ಅಂತರದಲ್ಲಿರುವ ಬಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿಲ್ಲ. ಕೇವಲ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಬೆಂಗಳೂರಿನಲ್ಲಿ ಸಭೆ ನಡೆಸಿ ಕ್ರಮವಹಿಸಲಾಗುವುದು ಎಂಬ ಭರವಸೆಯ ಮಾತುಗಳನ್ನು ಆಡಿದ್ದಾರೆ.