ಶಿವಮೊಗ್ಗ ಜಿಪಂ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರು ಶರಾವತಿ ಸಂತ್ರಸ್ತರ ಸಭೆ ನಡೆಸಿದರು. ಡಾ. ಆರ್.ಸೆಲ್ವಮಣಿ, ಡಾ. ಕೆ.ಟಿ.ಹನುಮಂತಪ್ಪ, ಶಿವಶಂಕರ್, ಸ್ನೇಹಲ್ ಲೋಖಂಡೆ ಇದ್ದರು.  
ಜಿಲ್ಲೆ

ಶರಾವತಿ ಸಂತ್ರಸ್ತರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸಿಎಂ, ಡಿಸಿಎಂ ಉತ್ಸುಕ: ಸಚಿವ ಮಧು ಬಂಗಾರಪ್ಪ

Shivamogga - Desk - Vinayakumar D B

ಶಿವಮೊಗ್ಗ: ಹಲವು ದಶಕಗಳ ಹಿಂದೆಯೇ ಸರ್ಕಾರದಿಂದ ಹಕ್ಕುಪತ್ರಗಳನ್ನು ಪಡೆದು ಸಾಗುವಳಿ ಮಾಡುತ್ತಿರುವರು ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿಕೊಂಡಿರುವ ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸುವ ಮುನ್ನ ಅವರು ಹೊಂದಿರುವ ದಾಖಲಾತಿಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಶರಾವತಿ ಸಂತ್ರಸ್ತರ ಪುನರ್ವಸತಿ ಮತ್ತು ಸಮಸ್ಯೆಗೆ ಶಾಶ್ವತ ಒದಗಿಸುವ ಕುರಿತು ಶನಿವಾರ ಅಧಿಕಾರಿಗಳೊಂದಿಗೆ ಸಮಾಲೋಚನ ಸಭೆ ನಡೆಸಿ ಮಾತನಾಡಿ, ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಕಳೆದ ವರ್ಷ ಶರಾವತಿ ಸಂತ್ರಸ್ತರ ಪ್ರತಿನಿಧಿಗಳು, ಪರಿಸರಾಸಕ್ತರು, ತಜ್ಞರು ಹಾಗೂ ಬುದ್ದಿಜೀವಿಗಳನ್ನೊಳಗೊಂಡ ಹಲವು ಸದಸ್ಯರ ಸಮಿತಿ ರಚಿಸಿ, ಹೋರಾಟ ರೂಪಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಅಂದಿನ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದರು.
ಜಿಲ್ಲೆಯಲ್ಲಿನ ಶರಾವತಿ ಸಂತ್ರಸ್ತರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬಹು ದಿನಗಳ ಈ ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ಸುಕರಾಗಿದ್ದಾರೆ. ಕಂದಾಯ ಇಲಾಖೆಯ ದಾಖಲೆಗಳಲ್ಲಿಯೂ ಬದಲಾವಣೆ ಮಾಡಿಕೊಡಬೇಕು. ಒಟ್ಟಾರೆ ಅಧಿಕಾರಿಗಳು ಕ್ರಮ ವಹಿಸುವ ಮುನ್ನ ಶರಾವತಿ ಸಂತ್ರಸ್ತರ ಸಮಸ್ಯೆ ಹೋರಾಟ ಸಮಿತಿ ಸದಸ್ಯರ ಸಲಹೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಸೊರಬ ತಾಲೂಕಿನ ಶಿಡ್ಡಿಹಳ್ಳಿ 140 ಜನರ ಮೇಲೆ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮರು ಪರಿಶೀಲಿಸಿ ಮೊಕದ್ದಮೆ ರದ್ದುಪಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಸಿಸಿಎಫ್ ಡಾ. ಕೆ.ಟಿ.ಹನುಮಂತಪ್ಪ, ಡಿಸಿಎಫ್ ಶಿವಶಂಕರ್, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಶರಾವತಿ ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.