ಜಿಲ್ಲೆ

ಶರಾವತಿ ಸಂತ್ರಸ್ತರ ಸಮಸ್ಯೆ, ಜಂಟಿ ಸ್ಥಳ ಸಮೀಕ್ಷೆಗೆ ಆದೇಶ

ಮೃತ್ಯುಂಜಯ ಕಪಗಲ್

ಬೆಂಗಳೂರು: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ನಿವಾರಣೆಗೆ ಜಂಟಿ ಸಮೀಕ್ಷೆ ನಡೆಸಿ, 25 ದಿನಗಳೊಳಗೆ ವರದಿ ಸಲ್ಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ಮತ್ತು ಶಿಕಾರಿಪುರ ತಾಲೂಕುಗಳ ಶರಾವತಿ ಸಂತ್ರಸ್ತರ ಸಮಸ್ಯೆ ಕುರಿತು ಸಂಸದ, ಶಾಸಕರು, ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಸಭೆ ಶುಕ್ರವಾರ ನಡೆಯಿತು.

ನಂತರ ಮಾಧ್ಯಮದವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ದಶಕಗಳಷ್ಟು ಹಳೆಯದಾದ ಜಟಿಲ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸಿಎಂ ಅಧ್ಯಕ್ಷತೆಯಲ್ಲಿ ಫಲಪ್ರದ ಚರ್ಚೆಯಾಗಿದೆ. 3-4 ಜನ ಸೆಟ್ಲಮೆಂಟ್ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಸಮೀಕ್ಷೆ ನಡೆಸಿ, ನಿಗದಿತ ಕಾಲಮಿತಿಯೊಳಗೆ ವರದಿ ಸಲ್ಲಿಸಬೇಕು. ಇನ್ನೂವರೆಗೆ ಶಾಶ್ವತ ನೆಲೆ, ಸಾಗುವಳಿ ಹಕ್ಕುಪತ್ರ ಇಲ್ಲದೆ ತೊಳಲಾಡುತ್ತಿರುವ ಸಂತ್ರಸ್ತರಿಗೆ ನೆಮ್ಮದಿ ಬದುಕು ಕಲ್ಪಿಸುವಂತೆ ಬಿಎಸ್ ವೈ ಸೂಚಿಸಿದ್ದಾರೆ ಎಂದರು.

ಶಾಸಕರಾದ ಕುಮಾರ ಬಂಗಾರಪ್ಪ, ಆರಗ ಜ್ಞಾನೇಂದ್ರ ಹರತಾಳು ಹಾಲಪ್ಪ ಇದ್ದರು.