ಜಿಲ್ಲೆ

ಯಡಿಯೂರಪ್ಪಗೆ ವರಿಷ್ಠರ ಅಭಯ: ದೂರವಾಣಿಯಲ್ಲಿ ಚರ್ಚಿಸಿದ ಅಮಿತ್ ಷಾ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ಕೆಲ ಶಾಸಕರು ಭಿನ್ನಮತೀಯ ಸಭೆ ನಡೆಸಿದ ಬೆನ್ನ ಹಿಂದೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷದ ವರಿಷ್ಠರು ಹಾಗೂ ರಾಜ್ಯದ ಮುಖಂಡರಿಂದ ಬೆಂಬಲ ವ್ಯಕ್ತವಾಗಿದೆ. ‘ನಿಮ್ಮ ಬೆನ್ನಿಗೆ ನಾವಿದ್ದೇವೆ’ ಎಂಬ ಭರವಸೆ ಸಿಕ್ಕಿರುವುದು ಬಿಎಸ್​ವೈ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಶುಕ್ರವಾರ ರಾತ್ರಿ ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ‘ನೀವು ಕರೊನಾ ನಿಯಂತ್ರಣ ಕಡೆ ಗಮನ ಹರಿಸಿ. ಉಳಿದಿದ್ದು ನಮಗೆ ಬಿಡಿ’ ಎಂದು ಧೈರ್ಯ ತುಂಬಿದ್ದಾರೆ. ಪಕ್ಷ ಭಿನ್ನಮತೀಯ ಚಟುವಟಿಕೆಗಳಿಗೆ ಯಾವತ್ತೂ ಪ್ರೋತ್ಸಾಹ ನೀಡುವುದಿಲ್ಲ. ಸರ್ಕಾರ ಜನಪರವಾದ ಕೆಲಸಗಳನ್ನು ಮಾಡುತ್ತ ಇರಲಿ. ರಾಜಕೀಯ ಅಧಿಕಾರದ ಹಂಚಿಕೆಯನ್ನು ಕಾಲ ಕೂಡಿ ಬಂದಾಗ ನಿರ್ಧರಿಸಲಾಗುತ್ತದೆ. ಅದಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದರೆಂದು ಮೂಲಗಳು ಖಚಿತಪಡಿಸಿವೆ.

ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬುದು ನಮ್ಮ ಗಮನಕ್ಕಿದೆ. ಅಧಿಕಾರಕ್ಕಾಗಿ ಒತ್ತಡ ತಂತ್ರಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಷಾ ಹೇಳಿದರೆನ್ನಲಾಗಿದೆ. ರಾಜ್ಯದಲ್ಲಿಯೂ ಬಹುತೇಕ ಸಚಿವರು ‘ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ’ರೆಂದೇ ಘೋಷಿಸಿದ್ದಾರೆ.

ಸಿಎಂ ಭೇಟಿಯಾದ ಜಾರಕಿಹೊಳಿ

ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಅಗತ್ಯಬಿದ್ದರೆ ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಕೊಡಿಸಲು ಸಿದ್ಧವೆಂದು ಭರವಸೆ ನೀಡಿದ್ದಾರೆ. ಅಂತಹ ಅಗತ್ಯವೇನು ಇಲ್ಲ, ಸರ್ಕಾರಕ್ಕೆ ಏನೂ ಆಗುವುದಿಲ್ಲವೆಂದು ಯಡಿಯೂರಪ್ಪ ಅವರೇ ಧೈರ್ಯ ತುಂಬಿ ಕಳುಹಿಸಿದರೆಂದು ಹೇಳಲಾಗಿದೆ.

ಜೋಶಿ, ಶೆಟ್ಟರ್ ಸಿಎಂ ಮಾಡಲು ಯತ್ನ

ಬೆಳಗಾವಿ: ಬಿಜೆಪಿ ರಾಜ್ಯ ನಾಯಕರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸುವ ಕೆಲಸಕ್ಕೆ ಕೈಹಾಕಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಥವಾ ಸಚಿವ ಜಗದೀಶ ಶೆಟ್ಟರ್ ಅವರನ್ನು ಸಿಎಂ ಮಾಡಲು ಕೆಲವರು ಹೈಕಮಾಂಡ್ ಕದ ತಟ್ಟುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಉಮೇಶ ಕತ್ತಿ ಔತಣಕೂಟ ಅವರ ಪಕ್ಷದ ಆಂತರಿಕ ವಿಚಾರ. ಆದರೆ, ಕಳೆದ ಹಲವು ದಿನಗಳಿಂದ ಸಿಎಂ ಬದಲಾವಣೆ ಕುರಿತ ರಾಜಕೀಯ ತೀವ್ರವಾಗಿದ್ದು, ಯಾವುದೇ ಸಂದರ್ಭದಲ್ಲೂ ಬ್ಲಾಸ್ಟ್ ಆಗಬಹುದು. ಬಿಎಸ್​ವೈ ಬದಲಾವಣೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರೂ ಕಾರ್ಯತಂತ್ರ ರೂಪಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಶಾಸಕರು ಮತ್ತು ಕಾಂಗ್ರೆಸ್​ನಿಂದ ಬಿಜೆಪಿಗೆ ಹೋಗಿರುವ ಶಾಸಕರು ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದರು.

ಯಾರೂ ಪಕ್ಷ ಬಿಡಲ್ಲ: ಶಾಸಕ ಉಮೇಶ ಕತ್ತಿ ಟೀಂ ಹೇಗೆ ಕುಸ್ತಿ ಮಾಡುತ್ತದೆ ಎನ್ನುವುದರ ಮೇಲೆ ಎಲ್ಲವೂ ನಿಂತಿದೆ ಎಂದ ಅವರು, ಗೊಂದಲ ಮೂಡಿಸುವುದೇ ರಮೇಶ್ ಜಾರಕಿಹೊಳಿ ಬಂಡವಾಳವಾಗಿದೆ. ರಮೇಶ ಹೇಳಿದಂತೆ ಯಾವುದೇ ಶಾಸಕರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದರು.

ಬಿಜೆಪಿಯಲ್ಲಿ ಬೆಂಕಿ ಬಿದ್ದಿರುವುದರಿಂದಲೇ ಕಾಂಗ್ರೆಸ್ ಶಾಸಕರ ಸಂಪರ್ಕದಲ್ಲಿ ಇರುವುದಾಗಿ ರಮೇಶ್ ಜಾರಕಿಹೊಳಿ ಹೇಳಿಕೊಳ್ಳುತ್ತಿದ್ದಾರೆ. ಇವರಿಂದಲೇ ಯಡಿಯೂರಪ್ಪ ಸರ್ಕಾರ ಬಿದ್ದರು ಆಶ್ಚರ್ಯವಿಲ್ಲ. ಯಡಿಯೂರಪ್ಪ ನಮ್ಮ ಲೀಡರ್ ಅಲ್ಲ, ಬರೀ ಸಿಎಂ ಅಷ್ಟೇ. ಜೆ.ಪಿ.ನಡ್ಡಾ, ಅಮಿತ್ ಷಾ ನಮ್ಮ ನಾಯಕರು ಎನ್ನುವ ಯತ್ನಾಳ್ ಮಾತಿನ ಸಂದೇಶವೇನು? | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ಕಾಂಗ್ರೆಸ್​ನಲ್ಲಿ ತಳಮಳ

ರಮೇಶ್ ಜಾರಕಿಹೊಳಿ ಹಾಗೂ ಸುಧಾಕರ್ ನೀಡಿರುವ ಹೇಳಿಕೆ ಕಾಂಗ್ರೆಸ್​ನಲ್ಲಿ ತಳಮಳಕ್ಕೆ ಕಾರಣವಾಗಿದೆ. ಈ ಹಿಂದೆಯೂ ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದ್ದರಿಂದ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಹೋದರು. ಆದ್ದರಿಂದ ಈ ಬಾರಿ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ಹಿಂದೆಯೂ ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಸವಾಲು ಹಾಕಿಯೇ ಬಂಡಾಯ ಸಾರಿದ್ದು, ಈಗಲೂ ಅವರ ನಡುವೆ ವೈಮನಸ್ಸು ದೂರವೇನು ಆಗಿಲ್ಲ. ಆದ್ದರಿಂದಲೇ ಕಾಂಗ್ರೆಸ್ ಅತ್ಯಂತ ಎಚ್ಚರಿಕೆಯ ಹೆಜ್ಜೆಯನ್ನಿಡಲು ನಿರ್ಧರಿಸಿದೆ.

ಯಾರು ಮಾತನಾಡಬೇಡಿ: ಬಿಜೆಪಿಯ ಆಂತರಿಕ ವಿಚಾರದ ಬಗ್ಗೆ ಯಾರೊಬ್ಬರೂ ಚರ್ಚೆ ಮಾಡದಿರುವಂತೆ ಕಾಂಗ್ರೆಸ್ ಪಕ್ಷದಿಂದ ಸೂಚನೆ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್​ಪಿ ನಾಯಕರನ್ನು ಹೊರತುಪಡಿಸಿ ಬೇರೆಯವರು ಟೀಕೆ, ಅಭಿಪ್ರಾಯ ವ್ಯಕ್ತಪಡಿಸಬಾರದೆಂದು ತಿಳಿಸಿರುವುದಾಗಿ ಡಿ,ಕೆ.ಶಿವಕುಮಾರ್ ಹೇಳಿದ್ದಾರೆ. ಬಿಜೆಪಿಯಲ್ಲಿರುವುದು ಆಂತರಿಕ ವಿಚಾರ, ನಮ್ಮ ಆದ್ಯತೆ ಪಕ್ಷ ಸಂಘಟನೆ ಮಾತ್ರ ಎಂದವರು ತಿಳಿಸಿದರು.

ಮೂರು ವರ್ಷದಲ್ಲಿ ಒಂದು ದಿನವೂ ಮಿಸ್ ಆಗದಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಪಕ್ಷದಲ್ಲಿ ಭಿನ್ನಮತವೂ ಇಲ್ಲ. ಬಿಎಸ್​ವೈ ರಾಜಾಹುಲಿ, ಯಾವತ್ತೂ ರಾಜಾಹುಲಿಯೇ, ಬಿಎಸ್​ವೈ ಸ್ಟ್ರಾಂಗೇ. ಕಾಂಗ್ರೆಸ್​ನಿಂದ 20 ಜನ ಬರಲು ಸಿದ್ಧರಿದ್ದಾರೆ. | ಆರ್.ಅಶೋಕ್ ಕಂದಾಯ ಸಚಿವ

ಪಕ್ಷ ಭಿನ್ನಮತ ಸಹಿಸಲ್ಲ

ಮಂಗಳೂರು: ಯಡಿಯೂರಪ್ಪ ನಾಯಕತ್ವದಲ್ಲಿ ನಾವೆಲ್ಲ ಒಟ್ಟಾಗಿ, ಒಂದಾಗಿ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಬಿಜೆಪಿ ಸರ್ಕಾರ ಸುಭದ್ರವಾಗಿದೆ. ಯಡಿಯೂರಪ್ಪ ಸಿಎಂ ಆಗಿ ಪೂರ್ಣ ಅವಧಿ ಪೂರೈಸಲಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ, ಗೊಂದಲಗಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಪಕ್ಷದ ಕೆಲವು ಶಾಸಕರು ಸಭೆ ನಡೆಸಿ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯ, ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ, ಪಕ್ಷ ಈ ಹಿಂದೆಯೂ ಅಶಿಸ್ತು ಸಹಿಸಿಲ್ಲ. ಮುಂದೆಯೂ ಸಹಿಸುವುದಿಲ್ಲ ಎಂದರು.

ಎಲ್ಲ ಕುಟುಂಬದಲ್ಲೂ ಗೊಂದಲ, ಅಸಮಾಧಾನ ಇದ್ದೇ ಇರುತ್ತದೆ. ಅಸಮಾಧಾನ ಇಲ್ಲವೆಂದು ನಾನು ಹೇಳಲ್ಲ. ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಅಸಮಾಧಾನ ಸರಿಪಡಿಸುವ ಶಕ್ತಿ ಪಕ್ಷಕ್ಕೆ ಇದೆ. | ಕೆ.ಎಸ್. ಈಶ್ವರಪ್ಪ ಸಚಿವ

ಜಿಲ್ಲಾವಾರು ಕೈ ಶಾಸಕರ ಮಾಹಿತಿ

ಬೆಂಗಳೂರು: ಬಿಜೆಪಿಯಲ್ಲಿ ಭಿನ್ನಮತೀಯ ಶಾಸಕರು ಸಭೆ ನಡೆಸಿದ ಬೆನ್ನಲ್ಲೇ ಸಚಿವ ರಮೇಶ್ ಜಾರಕಿಹೊಳಿ 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆಂದು ಜಿಲ್ಲಾವಾರು ಮಾಹಿತಿ ನೀಡಿದ್ದಾರೆ. ಇದು ಕಾಂಗ್ರೆಸ್​ನಲ್ಲಿ ತಳಮಳಕ್ಕೆ ಕಾರಣವಾಗಿದೆ. ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಹೈಕಮಾಂಡ್ ಒಪ್ಪಿದರೆ ಐವರು ಶಾಸಕರಿಂದ ವಾರದೊಳಗೆ ರಾಜೀನಾಮೆ ಕೊಡಿಸಬಲ್ಲೆ ಎಂದರು. ಸಂಪರ್ಕದಲ್ಲಿ ಇರುವ ಶಾಸಕರು ಯಾರು ಎಂಬುದನ್ನು ಬಹಿರಂಗ ಪಡಿಸಲು ಒಪ್ಪದ ಜಾರಕಿಹೊಳಿ, ಜಿಲ್ಲಾವಾರು ಎಷ್ಟು ಜನ ಇದ್ದಾರೆ ಎಂಬುದನ್ನು ಹೇಳಿದರು. ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯ ತಲಾ ಮೂವರು, ಬೀದರ್, ಕಲಬುರಗಿ, ಬಳ್ಳಾರಿ ರಾಯಚೂರು ಜಿಲ್ಲೆಗಳ ತಲಾ ಇಬ್ಬರು, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಹಾಗೂ ಕೋಲಾರದ ತಲಾ ಒಬ್ಬರು, ಬೆಂಗಳೂರು ಸುತ್ತ ಇಬ್ಬರು ಸಂಪರ್ಕದಲ್ಲಿ ಇದ್ದಾರೆ. ಇನ್ನೂ ಎರಡು ಜಿಲ್ಲೆಗಳ ಬಗ್ಗೆ ಮಾಹಿತಿ ನೀಡುವುದಿಲ್ಲವೆಂದು ಹೇಳಿದರು. ಯಡಿಯೂರಪ್ಪ ಈ ವಯಸ್ಸಿನಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ರಾಜಕೀಯ ಮಾಡುವುದು ತಪ್ಪಾಗುತ್ತದೆ ಎಂದರು.

ಜಾರಕಿಹೊಳಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್​ನ 20ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿರುವುದು ನಿಜ. ಹಿಂದೆ ಕಾಂಗ್ರೆಸ್​ನಲ್ಲಿ ನಾವು ಊಟಕ್ಕೆ ಸೇರುತ್ತ ಇದ್ದದ್ದು ಬಂಡಾಯ, ಈಗ ಉಮೇಶ್ ಕತ್ತಿ ಸಭೆ ನಡೆಸಿರುವುದು ಕೇವಲ ಊಟಕ್ಕೆ ಸೇರಿರುವುದು ಮಾತ್ರ. ಬಂಡಾಯವಲ್ಲ ಎಂದರು.

ಹೊರಗಿನಿಂದ 5 ಜನರನ್ನು ಕರೆ ತರುವುದು ಈ ಸಂದರ್ಭದಲ್ಲಿ ಹುಡುಗಾಟದ ಮಾತಾ? ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಬಹುಮತವಿದೆ. ಇಂತಹ ಸಮಯದಲ್ಲಿ ಇವರಿಗೆ ಯಾರು ಕರೆತರಲು ಹೇಳಿದ್ದಾರೆ? ಎಲ್ಲದಕ್ಕಿಂತಲೂ ಮಿಗಿಲಾಗಿ, ಈ ಬಗ್ಗೆ ಪಕ್ಷದ ಹೈಕಮಾಂಡ್ ಹಾಗೂ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. | ಎಸ್.ಟಿ.ಸೋಮಶೇಖರ್ ಸಚಿವ ಯಡಿಯೂರಪ್ಪ ನಮ್ಮೆಲ್ಲರ ಪ್ರಶ್ನಾತೀತ ನಾಯಕ. ಅವರು ಹೇಳಿದಂತೆ ನಾವೆಲ್ಲರೂ ಕೇಳಬೇಕಾಗುತ್ತದೆ. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. | ವಿ.ಸೋಮಣ್ಣ ವಸತಿ ಸಚಿವ