ಬೆಂಗಳೂರು: ಏಪ್ರಿಲ್ 20ರ ಬಳಿಕ ಕರೊನಾ ಲಾಕ್ಡೌನ್ನಲ್ಲಿ ಸಡಿಲಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರ ತೆಗೆದುಕೊಂಡಿದ್ದ ತೀರ್ಮಾನವನ್ನು ಹಿಂತೆಗೆದುಕೊಂಡಿದ್ದು, ಲಾಕ್ಡೌನ್ ಅನ್ನು ಯಥಾಸ್ಥಿತಿ ಕಾಯ್ದಿರಿಸಿಕೊಳ್ಳುವುದಾಗಿ ತಿಳಿಸಿದೆ.
ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಬಿಎಸ್ವೈ, ನಿರ್ಬಂಧಿತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದರು.
ಇದೀಗ ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ಮೊದಲನೆಯದಾಗಿ ದ್ವಿ-ಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ ನಿರ್ಧಾರವನ್ನು ಮರುಪರಿಶೀಲಿಸಿದ್ದು, ದ್ವಿ-ಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಲಾಕ್ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರೆಸುವುದಾಗಿ ಸರ್ಕಾರ ತಿಳಿಸಿದೆ.
ಎರಡನೆಯದಾಗಿ ಐ.ಟಿ.ಬಿ.ಟಿ. ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು, ಉಳಿದಂತೆ ಮನೆಯಿಂದಲೇ ಕೆಲಸ ಮಾಡುವ ನೀತಿಯನ್ನು ಮುಂದುವರೆಸಲಾಗುವುದು.
ಇವುಗಳನ್ನು ಹೊರತುಪಡಿಸಿ ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಏಪ್ರಿಲ್ 20ರ ಬಳಿಕ ಕಟ್ಟಡ ನಿರ್ಮಾಣ ಮುಂದುವರೆಸಬಹುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ರಸ್ತೆ, ಕಟ್ಟಡ ಕಾಮಗಾರಿಗೆ ಅನುಮತಿ ನೀಡಲಾಗಿದೆ. (ದಿಗ್ವಿಜಯ ನ್ಯೂಸ್)