ಯಡಿಯೂರಪ್ಪರದ್ದು ಸಿಡುಕಿನ ಸ್ವಭಾವ, ನಗುವುದೇ ಅಪರೂಪ, ಸದಾ ಪ್ರವಾಸದಲ್ಲಿರುವ ಅವರು ಕುಟುಂಬಕ್ಕೆ ಸಮಯ ನೀಡುವುದಿಲ್ಲ ಎಂದು ಹಲವರು ಭಾವಿಸಿದ್ದಾರೆ. ಆದರೆ, ಇದೆಲ್ಲ ಕಲ್ಪನೆಗಳು ಮಾತ್ರ. ಬಿಎಸ್ವೈ ಹೃದಯದಲ್ಲಿ ಒಬ್ಬ ಕಲಾಭಿಮಾನಿ, ಶಿಸ್ತಿನ ಸಿಪಾಯಿ, ಮಾತೃಹೃದಯಿ ಇದ್ದಾನೆ. ಅವರದ್ದು ಸಾತ್ವಿಕ ಕೋಪ ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಯಾರೂ ತಿಳಿಯದ ಅಪರೂಪದ ಸಂಗತಿಗಳು ಇಲ್ಲಿವೆ.
| ಅರವಿಂದ ಅಕ್ಲಾಪುರ ಶಿವಮೊಗ್ಗ ಅವರೆಕಾಳು ಉಪ್ಪಿಟ್ಟು: ಈ ಹೆಸರು ಕೇಳಿದರೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಏನೋ ಸಂಭ್ರಮ. ಅವರು ಅತೀ ಹೆಚ್ಚು ಇಷ್ಟ ಪಡುವ ತಿಂಡಿಯಿದು. ಬಿಎಸ್ವೈ ಭಾಗವಹಿಸುವ ಹಲವು ಕಾರ್ಯಕ್ರಮ, ಸುದ್ದಿಗೋಷ್ಠಿಗಳಲ್ಲಿ ಉಪಹಾರಕ್ಕೆ ಉಪ್ಪಿಟ್ಟನ್ನೇ ಮಾಡಿಸುವ ಮೂಲಕ ಆಯೋಜಕರು ಬಿ.ಎಸ್.ಯಡಿಯೂರಪ್ಪ ಇಷ್ಟದ ತಿಂಡಿಗೆ ಮನ್ನಣೆ ನೀಡುತ್ತಾರೆ.
ರೇಡಿಯೋ ಪ್ರಿಯ: ಬಿಎಸ್ವೈ ರಾಜಕೀಯ ಜೀವನದ ಆರಂಭದಲ್ಲಿ ಸದಾ ಅವರೊಂದಿಗೆ ಸೋನಿ ಟ್ರಾನ್ಸಿಸ್ಟರ್ ಒಂದಿರುತ್ತಿತ್ತು. ಬೆಳಗ್ಗೆ ಪ್ರದೇಶ ಸಮಾಚಾರ ಕೇಳಿಯೇ ಅವರು ಕೆಲಸ ಆರಂಭಿಸುತ್ತಿದ್ದರು. ಎಲ್ಲೇ ಹೋದರೂ ಅದನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ಪ್ರವಾಸದಲ್ಲಿ ಇದೇ ಇವರ ಸಂಗಾತಿಯಾಗಿತ್ತು.
ಊಟ-ತಿಂಡಿಯಲ್ಲಿ ಶಿಸ್ತು: ಊಟ, ತಿಂಡಿಯಲ್ಲಿ ಇಂದಿಗೂ ಯಡಿಯೂರಪ್ಪ ಶಿಸ್ತು ಕಾಯ್ದುಕೊಂಡಿದ್ದಾರೆ. ರುಚಿ-ಶುಚಿ ಜತೆಗೆ ಹದವಾದ ಬಿಸಿ ಅಡುಗೆ ಅವರಿಗಿಷ್ಟ. ರಸಂ, ಬಿಸಿ ಸಾಂಬಾರ್ ಇದ್ದರೆ ಇನ್ನೂ ಖುಷಿ. ಊಟದ ಬಳಿಕ ಐಸ್ಕ್ರೀಂನೊಂದಿಗೆ ಫ್ರೂಟ್ ಸಲಾಡ್ ಅಚ್ಚುಮೆಚ್ಚು. ಸಂಜೆ ರವೆ ದೋಸೆ, ಮಸಾಲೆ ರೊಟ್ಟಿ ಇದ್ದರೆ ಇಷ್ಟ.
ಸ್ನಾನವೇ ಮೊದಲು: ಎಷ್ಟೇ ಬಿಡುವಿಲ್ಲದ ಕಾರ್ಯಕ್ರಮಗಳಿರಲಿ. ಸ್ನಾನ ಮುಗಿಸದೆ ಯಡಿಯೂರಪ್ಪ ಎಂದಿಗೂ ತಿಂಡಿ ತಿಂದ ನಿದರ್ಶನಗಳಿಲ್ಲ. ಯಾವುದೇ ಊರಿರಲಿ, ಯಾವುದೇ ಸಂದರ್ಭವಿರಲಿ. ಎದುರಿಗೆ ಅವರೆಕಾಳು ಉಪ್ಪಿಟ್ಟೇ ತಂದಿಡಲಿ. ಸ್ನಾನ ಮೊದಲು ತಿಂಡಿ ನಂತರ ಎಂಬುದು ಅವರ ಪಾಲಿಸಿ.
ಹೂವು ಕಂಡರೆ ಪ್ರೀತಿ: ಹೂವುಗಳೆಂದರೆ ಬಿಎಸ್ವೈಗೆ ಪ್ರೀತಿ. ಯಾವುದೇ ವೇದಿಕೆಯಿರಲಿ, ಮನೆಯೇ ಆಗಿರಲಿ ಹೂವುಗಳಿಂದ ಅಲಂಕರಿಸಿದರೆ ಅವರಿಗೆ ಖುಷಿ ಹೆಚ್ಚು. ರಾಜಕೀಯ ಪ್ರವಾಸದ ಸಂದರ್ಭದಲ್ಲಿ ಮಂಗಳೂರು ಕಡೆಗೆ ಹೋದರೆ ಪತ್ನಿ ಮೈತ್ರಾದೇವಿಗೆ ಶಂಕರಪುರ ಮಲ್ಲಿಗೆದಂಡೆ ತಂದುಕೊಡುತ್ತಿದ್ದರು.
ನಾಟಕ-ಸಿನಿಮಾ ಇಷ್ಟ: ರಾಜಕೀಯ ಬದುಕಿನ ಆರಂಭದಲ್ಲಿ ಯಡಿಯೂರಪ್ಪ, ಪತ್ನಿ ಮೈತ್ರಾದೇವಿ ಅವರೊಂದಿಗೆ ಹಲವು ನಾಟಕ, ಸಿನಿಮಾ ವೀಕ್ಷಿಸುತ್ತಿದ್ದರು. ಈಗಲೂ ಬಿಡುವಿನ ಸಂದರ್ಭದಲ್ಲಿ ಅಪರೂಪಕ್ಕೆ ಕುಟುಂಬಸ್ಥರೊಂದಿಗೆ ಸಿನಿಮಾ ವೀಕ್ಷಿಸಿದ ನಿದರ್ಶನಗಳಿವೆ.
ಯಾರನ್ನೂ ಉಪೇಕ್ಷಿಸಲ್ಲ: ಯಡಿಯೂರಪ್ಪ ಇಂದು ರಾಜ್ಯದ ಮುಖ್ಯಮಂತ್ರಿ ಆಗಿರಬಹುದು. ಆದರೆ ಜತೆಗಿರುವವರನ್ನು ಎಂದಿಗೂ ಉಪೇಕ್ಷಿಸಿದ ಉದಾಹರಣೆಗಳಿಲ್ಲ. ತಮ್ಮ ಕೋಪದಿಂದ, ನಡೆ-ನುಡಿಯಿಂದ ಯಾರಿಗಾದರೂ ಬೇಸರವಾಗಿದೆ ಎಂದು ತಿಳಿದರೆ ಅವರನ್ನು ಮೃದುವಾಗಿ ಮಾತನಾಡಿಸಿ ನೋವು ಕಡಿಮೆ ಮಾಡುವ ಕಲೆ ಅವರಿಗೆ ಸಿದ್ಧಿಸಿದೆ.
ಕೋಪವೇ ವರ: ಯಡಿಯೂರಪ್ಪರಿಗೆ ಕೋಪ ವರವಾಗಿ ಪರಿಣಮಿಸಿದೆ. ಈಗ ಅವರು ಕೊಂಚ ಶಾಂತವಿದ್ದರೂ ಅಧಿಕಾರಿಗಳಿಗೆ ಹಿಂದಿನ ಕೋಪದ ಭಯವಿದೆ. ಹೀಗಾಗಿ ಯಡಿಯೂರಪ್ಪ ಏನೇ ಕೆಲಸ ಹೇಳಿದರೂ ತ್ವರಿತವಾಗಿ ಕಾರ್ಯರೂಪಕ್ಕೆ ಬರುತ್ತದೆ.