ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ '... ಸನಿಹಕೆ' ಬರಲಿದ್ದಾರೆ. ಅರ್ಥಾತ್, 'ನಿನ್ನ ಸನಿಹಕೆ' ಸಿನಿಮಾದ ಪ್ರೀಮಿಯರ್ ಶೋ ದಿನದಂದು ಚಿತ್ರರಂಗದ ಗಣ್ಯರೊಂದಿಗೆ ಅವರು ಇರಲಿದ್ದು, ಸಿಎಂ ಅವರೊಂದಿಗೆ ಸಿನಿಮಾ ನೋಡುವ ಅವಕಾಶ ಅಂದು ಹಲವರದ್ದಾಗಲಿದೆ.
ಡಾ. ರಾಜಕುಮಾರ್ ಅವರ ಮೊಮ್ಮಗಳು, ನಟ ರಾಮ್ಕುಮಾರ್ ಅವರ ಪುತ್ರಿಯೂ ಆಗಿರುವ ಧನ್ಯಾ ಹಾಗೂ ಸೂರಜ್ ಗೌಡ ಅಭಿನಯದ 'ನಿನ್ನ ಸನಿಹಕೆ' ಸಿನಿಮಾದ ಪ್ರೀಮಿಯರ್ ಶೋ ಗುರುವಾರ ಸಂಜೆ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಪಿವಿಆರ್ ಒರಾಯನ್ ಮಾಲ್ನಲ್ಲಿ ಇರಲಿದೆ.
ಇಂದು ಮುಖ್ಯಮಂತ್ರಿ ಅವರನ್ನು ಭೇಟಿಯಾದ ಚಿತ್ರತಂಡ ಸಿನಿಮಾದ ಮೊದಲ ಟಿಕೆಟ್ ಸಿಎಂ ಅವರಿಗೆ ನೀಡಿ ಅವರನ್ನು ಪ್ರೀಮಿಯರ್ ಶೋಗೆ ಆಹ್ವಾನಿಸಿತು. ಪ್ರೀಮಿಯರ್ ಶೋನಲ್ಲಿ ಸಿಎಂ ಮಾತ್ರವಲ್ಲದೆ ಡಾ. ರಾಜ್ ಕುಟುಂಬಸ್ಥರು ಸೇರಿ ಚಿತ್ರರಂಗದ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಸೂರಜ್ ಗೌಡ ನಿರ್ದೇಶನದ ಈ ಚಿತ್ರಕ್ಕೆ ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಗಿ ಅವರು ಬಂಡವಾಳ ಹೂಡಿದ್ದಾರೆ. ಇದೇ ಶುಕ್ರವಾರ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.