ಜಿಲ್ಲೆ

ಸಿಎಂ ಬೊಮ್ಮಾಯಿ‌ಗೆ ಆರ್​ಎಸ್​ಎಸ್​ನ ಮತ್ತೊಬ್ಬ ಪ್ರಮುಖ ಭೇಟಿ: ಹೊಸಬಾಳೆ ಬಳಿಕ ಮುಕುಂದ್ ದೌಡು

ಬೆಂಗಳೂರು: ಗುಜರಾತ್​ನಲ್ಲಿ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಬಿಜೆಪಿ ವರಿಷ್ಠರ ಚಿತ್ತ ಕರ್ನಾಟಕದತ್ತ ನೆಟ್ಟಿದೆ‌‌. ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ಗೆ ರಾಷ್ಟ್ರೀಯ ಸ್ವಯಂ ಸೇವಕಸಂಘದ ಮತ್ತೊಬ್ಬ ಪ್ರಭಾವಿ ಪ್ರಮುಖ ಶುಕ್ರವಾರ ದಿಢೀರ್ ಭೇಟಿ ಮಾಡಿರುವುದು ಕುತೂಹಲ ಹೆಚ್ಚಿಸಿದೆ‌.

ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ಗೆ ಸಂಘದ ಸರಕಾರ್ಯವಾಹ ಮುಕುಂದ್ ಆಗಮಿಸಿ, ಗೌಪ್ಯ ಮಾತುಕತೆ ನಡೆಸಿದರು. ಇದರಿಂದಾಗಿ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ನಿಗೂಢ ಬೆಳವಣಿಗೆಗಳ ಬಗ್ಗೆ ಪಕ್ಷದೊಳಗೆ ತರ್ಕ ಹುಟ್ಟಿಹಾಕಿದೆ.

ಗುಜರಾತ್ ಫಲಿತಾಂಶ ಪ್ರಕಟಣೆಗೆ ಮುನ್ನ ಬೊಮ್ಮಾಯಿ‌ ಅವರನ್ನು ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಫಲಿತಾಂಶ ಹೊರಬಿದ್ದ ನಂತರ ಮುಕುಂದ್ ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ‌.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೊಮ್ಮೆ ಗೆಲ್ಲಲೇಬೇಕು ಎಂದು ವರಿಷ್ಠರು ಪಣ ತೊಟ್ಟಿದ್ದು, ಇದಕ್ಕೆ ಪೂರಕವಾಗಿ ಸಂಘದ ಪ್ರಮುಖರು ನೇರ ಸಿಎಂ ಜತೆಗೆ ಚರ್ಚಿಸಿ ನೀಲನಕ್ಷೆಗೆ ನೆರವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ‌.

ಸರ್ಕಾರ, ಪಕ್ಷ ಹಾಗೂ ಸಂಘದ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿಯು ಕರ್ನಾಟಕದಲ್ಲಿ ಮುಕುಂದ್ ಅವರ ಹೆಗಲ ಮೇಲಿದ್ದು, ಕಾಲಕಾಲಕ್ಕೆ ಸಂಘದ ಕಚೇರಿಯಲ್ಲಿ ಮಾತುಕತೆ ನಡೆಸಿದ್ದಿದೆ. ಇದೀಗ ಹೊಸಬಾಳೆ ಹಾದಿಯಲ್ಲಿ ಸಾಗಿದ ಮುಕುಂದ್ ಅವರು ಬೊಮ್ಮಾಯಿ‌ ಜತೆಗೆ ಚರ್ಚಿಸಿದ್ದು, ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.